ಬೆಂಗಳೂರು [ಜೂ.28] :  ಜಿಂದಾಲ್ ಕಂಪನಿಯ ಭ್ರಷ್ಟಾಚಾರದ ವಿರುದ್ಧ ಜು.6ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಡ್ಯಾಂ ಸೇತುವೆ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುತ್ತೇವೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಿಂದಾಲ್‌ ಕಂಪನಿಗೆ 3667 ಎಕರೆ ಜಮೀನನ್ನು ಅಗ್ಗದ ದರದಲ್ಲಿ ನೀಡುತ್ತಿರುವುದರ ಬಗ್ಗೆ ಜು.15ರಂದು ತೋರಣಗಲ್ ಹತ್ತಿರ ಗಡಿನಾಡು ಕನ್ನಡಿಗರ ಸಮ್ಮೇಳನ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಜಿಂದಾಲ್‌ ಭ್ರಷ್ಟಾಚಾರದ ವಿರುದ್ಧ ಬಳ್ಳಾರಿ ಜಿಲ್ಲೆಯನ್ನು ಬಂದ್‌ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

1995ರಿಂದ ಇಲ್ಲಿಯವರೆಗೆ ಬಂದಂತಹ ಸರ್ಕಾರಗಳು 11,406 ಎಕರೆ ಜಾಗವನ್ನು ಜಿಂದಾಲ… ಕಂಪನಿಗೆ ನೀಡಿವೆ. ಬಳ್ಳಾರಿ ಜಿಲ್ಲೆ ಜಿಂದಾಲ… ಕಂಪನಿಯ ಹತೋಟಿಯಲ್ಲಿದೆ. ಬಳ್ಳಾರಿಯ ಸುತ್ತಮುತ್ತಲಿನ ರೈತರ ಜಮೀನೆಲ್ಲ ಕಂಪನಿಯ ಪಾಲಾಗಿದ್ದು, ಅಲ್ಲಿನ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದೆ. ಜಿಂದಾಲ್‌ ಕಂಪನಿ ಸರ್ಕಾರಕ್ಕೆ ಒಂದೂವರೆ ಸಾವಿರ ಕೋಟಿ ತೆರಿಗೆ ವಂಚಿಸಿದೆ. ಈ ಕಂಪನಿಯಲ್ಲಿ ಕನ್ನಡಗರಿಗೆ ಉದ್ಯೋಗವನ್ನೂ ನೀಡಿಲ್ಲ. ಆದ್ದರಿಂದ ಕಂಪನಿ ವಿರುದ್ಧ ಹೋರಾಟ ಅನಿವಾರ್ಯಯವಾಗಿದೆ ಎಂದು ಹೇಳಿದರು.