ತಮಿಳುನಾಡು, ಆಂಧ್ರದಲ್ಲಿ ಭಾರಿ ಚಂಡಮಾರುತ | ಚೆನ್ನೈನಲ್ಲಿ ನಾಲ್ಕು ಮಂದಿ ಸಾವು | ರೈಲು, ವಿಮಾನ ಸಂಚಾರ ತಟಸ್ಥ
ಚೆನ್ನೈ/ಅಮರಾವತಿ: ನಾಡ ಚಂಡಮಾರುತದ ಅಪಾಯದಿಂದ ತಪ್ಪಿಸಿಕೊಂಡಿದ್ದ ತಮಿಳುನಾಡಿಗೆ, ಹದಿನೈದು ದಿನಗಳಲ್ಲೇ ವಾರ್ದ ಚಂಡಮಾರುತ ಅಪ್ಪಳಿಸಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ಇಬ್ಬರು ಅಸುನೀಗಿದ್ದರೆ, ಆಂಧ್ರಪ್ರದೇಶದ ಕಾಕಿನಾಡದಲ್ಲಿ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದವರು ನಾಪತ್ತೆಯಾಗಿದ್ದಾರೆ. ಒಟ್ಟಾರೆ ಚಂಡಮಾರುತಕ್ಕೆ 10 ಮಂದಿ ಬಲಿಯಾಗಿರುವ ಶಂಕೆ ಇದೆ.
ಚಂಡಮಾರುತದ ಪ್ರಭಾವದಿಂದ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಗಂಟೆಗೆ 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರ ಪ್ರಮಾಣ ತಗ್ಗಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಮುಂದಿನ ಗಂಟೆಗಳಲ್ಲಿ ಅದರ ವೇಗ ಗಂಟೆಗೆ 60-70 ಕಿಮೀಗೆ ಇಳಿಯಲಿದೆ. ಆದರೂ ಧಾರಾಕಾರ ಮಳೆಯಾಗಲಿದೆ ಎಂದು ಅದು ಹೇಳಿದೆ. ಮಳೆ ಸಂಬಂಧಿ ಅಪಾಯಗಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ಉತ್ತರ ಚೆನ್ನೈ, ತಿರುವಳ್ಳುವರ್ ಮತ್ತು ಕಾಂಚಿಪುರಂ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತಮಿಳುನಾಡಿನಲ್ಲಿ 8 ಸಾವಿರ ಮತ್ತು ಆಂಧ್ರಪ್ರದೇಶದಲ್ಲಿ 9,400 ಮಂದಿಯನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ 7, ತಮಿಳುನಾಡು ವಿಪತ್ತು ನಿರ್ವಹಣಾ ದಳದ 2, ಸೇನೆಯ ಎರಡು ತುಕಡಿಗಳು ಪರಿಹಾರ ಮತ್ತು ರಕ್ಷಣೆಯಲ್ಲಿ ನಿರತವಾಗಿವೆ. ರಾಜಧಾನಿ ಚೆನ್ನೈನ ವಿವಿಧ ಭಾಗಗಳಲ್ಲಿ ಮರಗಳು ಉರುಳಿ ಬಿದ್ದಿವೆ. ರಾಜಧಾನಿಯೊಂದರಲ್ಲೇ 568 ಮರಗಳು ಬಿದ್ದಿವೆ. ವಿವಿಧ ರಕ್ಷಣಾ ಸಂಸ್ಥೆಗಳ ಜತೆಗೆ ಸ್ಥಳೀಯರೂ ಕೂಡ ರಸ್ತೆಗಳಲ್ಲಿ ಬಿದ್ದಿರುವ ಮರಗಳು, ವಿದ್ಯುತ್, ದೂರವಾಣಿ ಕಂಬಗಳನ್ನು ತೆರವುಗೊಳಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಗೆ ಚೆನ್ನೈನಿಂದ ಹೊರಡುವ ಎಲ್ಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇದರ ಜತೆಗೆ ಉಪನಗರ ರೈಲು ಸಂಚಾರವೂ ರದ್ದಾಗಿದೆ.
ತಮಿಳುನಾಡಿನಲ್ಲಿ ಭಾರಿ ಮಳೆ: ರಾಜಧಾನಿ ಚೆನ್ನೈನಲ್ಲಿ ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಮರಗಳು, ವಿದ್ಯುತ್, ದೂರವಾಣಿ ಕಂಬಗಳು ಉರುಳಿ ಬಿದ್ದಿವೆ. ವಾಹನಗಳು, ಮನೆಯ ಮೇಲ್ಚಾವಣಿಗಳು ಹಾರಿಹೋಗಿವೆ. ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಬರಲೇಬೇಡಿ ಎಂದು ಮುಖ್ಯಮಂತ್ರಿ ಓ.ಪನೀರ್‌ಸೆಲ್ವಂ ಜನರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನ 2.30ರಿಂದ ಸಂಜೆ 4.30ರ ಅವಧಿಯಲ್ಲಿ ಪ್ರತಿ ಗಂಟೆಗೆ 120 ಕಿಮೀ ವೇಗದಲ್ಲಿ ತಮಿಳುನಾಡು ಕರಾವಳಿಗೆ ಚಂಡಮಾರುತ ಅಪ್ಪಳಿಸಿತು. ಅದಕ್ಕಿಂತ ಮೊದಲೇ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿತ್ತು. ತಿರುವಳ್ಳುವರ್ ಜಿಲ್ಲೆಯಲ್ಲಿ ಇಬ್ಬರು ಅಸುನೀಗಿದ್ದಾರೆ. ಅದೇ ಜಿಲ್ಲೆಯಲ್ಲಿ 24 ಗುಡಿಸಲುಗಳು ನೀರುಪಾಲಾಗಿವೆ. ಒಟ್ಟು 256 ನಿರಾಶ್ರಿತರ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಆ ಪೈಕಿ 95 ಈಗಾಗಲೇ ಕಾರ್ಯಾರಂಭ ಮಾಡಿವೆ. ಅಡ್ಯಾರ್ ಮತ್ತು ತಿರುವನ್‌ಮಯೂರ್ ಪ್ರದೇಶದಲ್ಲಿರುವ ಮೀನುಗಾರರಿಗೆ ಸ್ಥಳೀಯ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮುಂದಿನ 36 ಗಂಟೆಗಳ ವರೆಗೆ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
170 ಹಾರಾಟ ರದ್ದು: ಚೆನ್ನೈ ವಿಮಾನ ನಿಲ್ದಾಣದಿಂದ ಒಟ್ಟು 170 ವಿಮಾನಗಳ ಹಾರಾಟ ರದ್ದಾಗಿದೆ. ಈ ಪೈಕಿ 44 ಅಂತಾರಾಷ್ಟ್ರೀಯ, 123 ದೇಶೀಯ ವಿಮಾನ ಹಾರಾಟ ಸೇರಿವೆ. ಕೆಲವೊಂದು ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸುವಂತೆ ಸೂಚಿಸಲಾಗಿತ್ತು. ಚೆನ್ನೈ, ಕಂಚೀಪುರಂ ಮತ್ತು ತಿರುವಳ್ಳುವರ್ ಜಿಲ್ಲೆಗಳಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ರೈಲ್ವೆ ಆಸ್ತಿಗೆ ಹಾನಿ: ಚಂಡಮಾರುತದಿಂದಾಗಿ ದಕ್ಷಿಣ ರೈಲ್ವೆಯ ಸಂಚಾರ ಮತ್ತು ಮೂಲ ಸೌಕರ್ಯ ವ್ಯವಸ್ಥೆಗಳಿಗೆ ಧಕ್ಕೆ ಉಂಟಾಗಿದೆ. ವಿದ್ಯುತ್‌ದೀಕರಣಗೊಂಡ ಮಾರ್ಗಗಳಲ್ಲಿ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ಜೋಲಾರ್‌ಪೇಟೆಗಳಲ್ಲಿ 16 ರೈಲುಗಳು ನಿಂತಿವೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಬೆಂಗಳೂರು-ಚೆನ್ನೈ ಸೇರಿದಂತೆ 14ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ: ಆಂಧ್ರಪ್ರದೇಶದ ಚಿತ್ತೂರು ಮತ್ತು ನೆಲ್ಲೂರುಗಳಲ್ಲಿ ಭಾರಿ ಪ್ರಮಾಣದ ಹಾನಿಯಾಗಿಲ್ಲ. ಆದರೆ ಚಿತ್ತೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಪ್ರಕಾಶಂ, ಅನಂತಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಸಮುದ್ರಕ್ಕೆ ತೆರಳಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದ್ದರೂ, ಮೀನುಗಾರಿಕೆಗಾಗಿ ತೆರಳಿದ್ದ ಇಬ್ಬರು ಮೀನುಗಾರರು ಕಾಕಿನಾಡದಲ್ಲಿ ಸಮುದ್ರಪಾಲಾಗಿದ್ದಾರೆ. ಅವರಿಗಾಗಿ ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯ ನಡೆಸುತ್ತಿದೆ. ಇದೇ ವೇಳೆ ಸಮುದ್ರದಲ್ಲಿ ಮೀನುಗಾರಿಕೆಗಾಗಿ ತೆರಳಿದ್ದ ತಮಿಳುನಾಡಿನ 18 ಮೀನುಗಾರರನ್ನು ರಕ್ಷಿಸಲಾಗಿದೆ.
ಬೆಂಗಳೂರಲ್ಲಿ 14 ವಿಮಾನ ರದ್ದು:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಬೇಕಾಗಿದ್ದ 14 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ ವಿವಿಧ ಕಡೆಗಳಿಂದ ಚೆನ್ನೈನಲ್ಲಿ ಇಳಿಯಬೇಕಾಗಿದ್ದ 16 ವಿಮಾನಗಳ ಮಾರ್ಗ ಬದಲಿಸಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಜತೆಗೆ ಚೆನ್ನೈನಿಂದಲೂ ಬೆಂಗಳೂರಿಗೆ ಯಾವುದೇ ವಿಮಾನಗಳು ಹಾರಾಟ ನಡೆಸಿಲ್ಲ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಇಸ್ರೋದ ಲಾಂಚ್ ಪ್ಯಾಡ್'ಗಳು ಪಾರು:
ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡು ರಾಕೆಟ್ ಲಾಂಚ್ ಪ್ಯಾಡ್‌ಗಳು ಚಂಡಮಾರುತದಿಂದ ಪಾರಾಗಿದೆ ಎಂದು ಇಸ್ರೋ ಮೂಲಗಳನ್ನು ಉಲ್ಲೇಖಿಸಿ ‘ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಪ್ರಾಕೃತಿಕ ವಿಪತ್ತಿನ ಬಗ್ಗೆ ಮುನ್ಸೂಚನೆ ಅರಿತು ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ಅಪಾಯ ತಪ್ಪಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಕಲಪ್ಪಾಕಂ ಅಣುಸ್ಥಾವರದಲ್ಲಿ ಎಚ್ಚರ: ಚಂಡಮಾರುತದ ಹಿನ್ನೆಲೆಯಲ್ಲಿ ಕಲಪ್ಪಾಕಂ ಪರಮಾಣು ಸ್ಥಾವರದಲ್ಲಿ ಕಟ್ಟೆಚ್ಚರದ ಸ್ಥಿತಿ ಕಾಯ್ದುಕೊಳ್ಳಲಾಗಿದೆ. ಸ್ಥಾವರ ಕಾರ್ಯನಿರ್ವಹಣೆ ಸದ್ಯಕ್ಕೆ ತೃಪ್ತಿಕರವಾಗಿದೆ ಎಂದು ದೆಹಲಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಎಫ್) ತಿಳಿಸಿದೆ. ಸ್ಥಾವರದ ಆಡಳಿತ ಮಂಡಳಿ ಕೂಡ ಹವಾಮಾನ ಇಲಾಖೆಯ ಜತೆಗೆ ನಿಕಟ ಸಂಪರ್ಕದಲ್ಲಿದೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ.
ಗೋವಾ ದಾಟಲಿದೆ: ಎರಡು ರಾಜ್ಯಗಳಲ್ಲಿ ಧಾರಾಕಾರ ಮಳೆಗೆ ಕಾರಣವಾಗಿರುವ ವಾರ್ದಾ ಚಂಡಮಾರುತ ಡಿ.14ರಂದು ಗೋವಾ ಮೂಲಕ ಹಾದು ಹೋಗಲಿದೆ. ಇದರಿಂದಾಗಿ ಆ ರಾಜ್ಯದಲ್ಲಿ ತಾಪಮಾನದಲ್ಲಿ ಏರಿಕೆಯಾಗುವುದರ ಜತೆಗೆ ಹಗುರದಿಂದ ಸಾಧಾರಣವಾಗಿ ಮಂಗಳವಾರ ಮತ್ತು ಬುಧವಾರ ಮಳೆಯಾಗಲಿದೆ.
(ಪಿಟಿಐ ವರದಿ)
epaper.kannadaprabha.in
