ಬಿಬಿಎಂಪಿ ಚುನಾವಣೆ ವೇಳೆ ನಡೆದದ್ದು ಐಟಿ ರೇಡ್ ಅಲ್ಲ, ಚುನಾವಣಾ ಆಯೋಗದ ದಾಳಿಯಾಗಿತ್ತು. ರೇಡ್ ಆದ ಮನೆಯು ತನಗೆ ಸೇರಿದ್ದಾದರೂ ಅದರಲ್ಲಿ ವಾಸ ಇದ್ದದ್ದು ತನ್ನವರಲ್ಲ. ಹೇಮಲತಾ ಎಂಬುವವರು ಇದ್ದ ಆ ಮನೆಯಲ್ಲಿ ಆಗ 1.15 ಕೋಟಿ ರೂ. ಕ್ಯಾಷ್ ಸಿಕ್ಕಿತ್ತು. ಆದರೆ, ಚುನಾವಣಾ ಆಯೋಗದ ತನಿಖೆಯಲ್ಲಿ ಆ ಹಣ ತನಗೆ ಸೇರಿದ್ದಲ್ಲ ಎಂಬುದು ರುಜುವಾತಾಗಿದೆ ಎಂದು ವರಪ್ರಸಾದ್ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು(ಆ. 27): ಕಾಂಗ್ರೆಸ್'ನಿಂದ ಬಿಜೆಪಿಗೆ ಪಕ್ಷಾಂತರವಾದ ಡಿಕೆಶಿ ಬಲಗೈ ಬಂಟ ವರಪ್ರಸಾದ್ ರೆಡ್ಡಿ ತನ್ನ ಜೊತೆಗೆ ಕೆಲ ವಿವಾದಗಳನ್ನೂ ಹೊತ್ತು ತಂದಿದ್ದಾರೆ. ರೆಡ್ಡಿ ಮೇಲೆ ಐಟಿ ರೇಡ್, ಚುನಾವಣಾ ಆಯೋಗದ ರೇಡ್ ಆಗಿವೆ; ಕ್ರಿಮಿನಲ್ ಕೇಸ್'ಗಳೂ ಆಗಿವೆ ಎಂಬ ಆರೋಪಗಳು ಸಾಕಷ್ಟು ಕೇಳಿಬರುತ್ತಿದ್ದು, ಬಿಜೆಪಿಯೊಳಗೆಯೇ ಅವರ ಬಗ್ಗೆ ಆಕ್ಷೇಪಗಳು ವ್ಯಕ್ತಪವಾಗುತ್ತಿರುವ ಮಾತು ಕೇಳಿಬರುತ್ತಿದೆ. ಆದರೆ, ವರಪ್ರಸಾದ್ ರೆಡ್ಡಿ ತಮ್ಮ ಮೇಲಿನ ಆರೋಪಗಳನ್ನ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ವರಪ್ರಸಾದ್ ರೆಡ್ಡಿ, ಐಟಿ ರೇಡ್'ನಲ್ಲಿ 6 ಕೋಟಿ ರೂ ಸಿಕ್ಕಿದೆ ಎನ್ನುವುದೆಲ್ಲಾ ಸುಳ್ಳು, ತನ್ನ ಮೇಲೆ ಐಟಿ ರೇಡ್ ಆಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಚುನಾವಣೆ ವೇಳೆ ನಡೆದದ್ದು ಐಟಿ ರೇಡ್ ಅಲ್ಲ, ಚುನಾವಣಾ ಆಯೋಗದ ದಾಳಿಯಾಗಿತ್ತು. ರೇಡ್ ಆದ ಮನೆಯು ತನಗೆ ಸೇರಿದ್ದಾದರೂ ಅದರಲ್ಲಿ ವಾಸ ಇದ್ದದ್ದು ತನ್ನವರಲ್ಲ. ಹೇಮಲತಾ ಎಂಬುವವರು ಇದ್ದ ಆ ಮನೆಯಲ್ಲಿ ಆಗ 1.15 ಕೋಟಿ ರೂ. ಕ್ಯಾಷ್ ಸಿಕ್ಕಿತ್ತು. ಆದರೆ, ಚುನಾವಣಾ ಆಯೋಗದ ತನಿಖೆಯಲ್ಲಿ ಆ ಹಣ ತನಗೆ ಸೇರಿದ್ದಲ್ಲ ಎಂಬುದು ರುಜುವಾತಾಗಿದೆ ಎಂದು ವರಪ್ರಸಾದ್ ರೆಡ್ಡಿ ತಿಳಿಸಿದ್ದಾರೆ.

ಯಾರು ಈ ವರಪ್ರಸಾದ್ ರೆಡ್ಡಿ?
ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ವರಪ್ರಸಾದ್ ರೆಡ್ಡಿ ಅವರು ಸಿರಿ ಹೋಮ್ಸ್ ಎಂಬ ಸಂಸ್ಥೆಯ ಮಾಲೀಕರಾಗಿದ್ದಾರೆ. ಡಿಕೆ ಶಿವಕುಮಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್'ನಲ್ಲಿ ಸ್ಪರ್ಧಿಸಿ ಸೋಲೂ ಕೂಡ ಅನುಭವಿಸಿದ್ದರು.

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ಪ್ರತಿಕ್ರಿಯೆ ನೀಡಿರುವ ವರಪ್ರಸಾದ್ ರೆಡ್ಡಿ, ತನ್ನ ಮೇಲೆಯೇ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದನ್ನು ತಿಳಿಸಿದ್ದಾರೆ. "ನಾನು ದೊಡ್ಡ ಮಟ್ಟದಲ್ಲಿ ಬೆಳದಿರುವುದನ್ನು ತಿಳಿದ ಸಂದೀಪ್ ಎಂಬ ಹುಡುಗ ಸುಳ್ಳು ಬೆದಕರಿಕೆ ಹಾಕಿ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದ. ಇಷ್ಟು ಕೋಟಿ ಕೊಡು, ಅಷ್ಟು ಕೋಟಿ ಕೊಡು, ಇಲ್ಲದಿದ್ದರೆ ನಿನ್ನನ್ನು ಸಾಯಿಸ್ತೀನಿ, ಮಕ್ಕಳನ್ನು ಕಿಡ್ನಾಪ್ ಮಾಡ್ತೀನಿ ಎಂದು ಆ ವ್ಯಕ್ತಿ ಆಗಾಗ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ನಾನು ಎಸಿಪಿ ಬಳಿ ದೂರನ್ನೂ ಕೊಟ್ಟಿದ್ದೆ," ಎಂದು ರೆಡ್ಡಿ ವಾದಿಸಿದ್ದಾರೆ.

ಸಂದೀಪ್ ಎನ್ನುವ ಆ ಹುಡುಗ ತಾನೇ ಸ್ವಲ್ಪ ಗಾಯ ಮಾಡಿಕೊಂಡು ನಿರ್ದಿಷ್ಟ ಆಸ್ಪತ್ರೆಗೆ ಹೋಗುವುದು, ನಿರ್ದಿಷ್ಟ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವುದು ಮಾಡುತ್ತಿರುತ್ತಿದ್ದ ಎಂದೂ ವರಪ್ರಸಾದ್ ರೆಡ್ಡಿ ಹೇಳಿದ್ದಾರೆ.

ಮೋದಿ, ಯಡಿಯೂರಪ್ಪ ಕೆಲಸ ನೋಡಿ ಬಂದಿದ್ದೇನೆ...
ಉತ್ತರಹಳ್ಳಿಯಲ್ಲಿ ತನಗೆ ಸಾಕಷ್ಟು ಜನಪ್ರಿಯತೆ ಇದೆ ಎಂದು ಹೇಳಿಕೊಳ್ಳುವ ಇವರು, ಮೋದಿ ಮತ್ತು ಯಡಿಯೂರಪ್ಪನವರ ಕೆಲಸ ನೋಡಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ದೇಶದೆಲ್ಲೆಡೆ ಪ್ರಧಾನಿ ಮೋದಿಯವರದ್ದೇ ಮಾತಾಗಿದೆ. ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಅವರು ಅಭಿವೃದ್ಧಿಕಾರ್ಯ ನಡೆಸುತ್ತಿದ್ದಾರೆ. ಹೀಗಾಗಿ ತಾನು ಬಿಜೆಪಿಯನ್ನು ಸೇರಿರುವುದಾಗಿ ಹೇಳಿದ್ದಾರೆ. ಇದೇ ವೇಳೆ, ತಾನು ಟಿಕೆಟ್ ಆಕಾಂಕ್ಷಿಯಲ್ಲ. ಪಕ್ಷದ ನಾಯಕರು ಕೊಡುವ ಯಾವುದೇ ಜವಾಬ್ದಾರಿಯನ್ನೂ ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ವರಪ್ರಸಾದ್ ರೆಡ್ಡಿ ತಿಳಿಸಿದ್ದಾರೆ.

ಇಂದು ವರಪ್ರಸಾದ್ ರೆಡ್ಡಿಯವರು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಭಾನುವಾರ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ.