ನವದೆಹಲಿ[ಜೂ. 05]  ಉತ್ತರಾಖಂಡದ ಹಣಕಾಸು ಸಚಿವ ಪ್ರಕಾಶ್ ಪಂತ್ ಬುಧವಾರ ಅಮೆರಿಕಾದಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರಕಾಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಉತ್ತರಾಖಂಡದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಲಾಗಿದೆ. "ಉತ್ತರಾಖಂಡದ ಹಣಕಾಸು ಸಚಿವ ಶ್ರೀ ಪ್ರಕಾಶ್ ಪಂತ್ ಅವರ ಅಕಾಲಿಕ ಮರಣ ನೋವು ತಂದಿದೆ. ಅವರ ಕೌಶಲ್ಯಗಳು ಬಿಜೆಪಿ ಮತ್ತು ಉತ್ತರಾಖಂಡದ ಪ್ರಗತಿಗೆ ನೆರವಾಗಿದ್ದವು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

1960 ರ ನವೆಂಬರ್ 11 ರಂದು ಉತ್ತರಾಖಂಡದ ಪಿಥೋರಗಡ್ ನಲ್ಲಿ ಜನಿಸಿದ ಪಂತ್ ಉತ್ತರಾಖಂಡ್ ವಿಧಾನಸಭೆಯ ಮೊದಲ ಸ್ಪೀಕರ್ ಆಗಿದ್ದರು. 2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿಯ ರೇಸ್ ನಲ್ಲಿ ಇದ್ದು ನಂತರ ಹಣಕಾಸು ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದರು.