ವಿದ್ಯಾರ್ಥಿಗಳು ನೆಲ ಒರೆಸುವ ಚಿತ್ರ ತೆಗೆದ ಪತ್ರಕರ್ತ ಬಂಧನ| ರಾಷ್ಟ್ರೀಯ ದಿನ ಪತ್ರಿಕೆಯ ಸ್ಥಳೀಯ ಪ್ರತಿನಿಧಿ ಸಂತೋಷ್ ಜೈಸ್ವಾಲ್ ಬಂಧನ
ಅಜಂಗಢ[ಸೆ.10]: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಚಪಾತಿಯೊಂದಿಗೆ ಸಾಂಬಾರಿನ ಬದಲಿಗೆ ಉಪ್ಪು ನೀಡಲಾಗುತ್ತದೆ ಎಂದು ಆರೋಪಿಸಿದ್ದ ಪತ್ರಕರ್ತರೊಬ್ಬರ ಮೇಲೆ ದೂರು ದಾಖಲಿಸಿದ್ದ ಉತ್ತರ ಪ್ರದೇಶ ಸರ್ಕಾರ, ಈಗ ಶಾಲೆಯಲ್ಲಿ ವಿದ್ಯಾರ್ಥಿಗಳು ನೆಲ ಒರೆಸುವ ಚಿತ್ರ ಸೆರೆಹಿಡಿದ ಮತ್ತೊಬ್ಬ ಪತ್ರಕರ್ತನನ್ನು ಬಂಧಿಸಿದೆ. ರಾಷ್ಟ್ರೀಯ ದಿನ ಪತ್ರಿಕೆಯ ಸ್ಥಳೀಯ ಪ್ರತಿನಿಧಿ ಸಂತೋಷ್ ಜೈಸ್ವಾಲ್ ಎಂಬವನನ್ನು ಅಜಂಗಢ ಪೊಲೀಸರು ಬಂಧಿಸಿದ್ದು. ಸುಲಿಗೆ ಹಾಗೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲಾಗಿದೆ.
ಕಳೆದ ಶುಕ್ರವಾರ ಶಾಲೆಯಲ್ಲಿ ಮಕ್ಕಳು ನೆಲ ಒರೆಸುವ ಚಿತ್ರ ಸೆರೆಹಿಡಿದು, ಶಾಲೆಯಲ್ಲಿ ಮಕ್ಕಳನ್ನು ಅನಧಿಕೃತ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಜೈಸ್ವಾಲ್ ಆರೋಪಿಸಿದ್ದ. ಸ್ಥಳಕ್ಕೆ ಬಂದ ಪೊಲೀಸರು ಜೈಸ್ವಾಲ್ ಹಾಗೂ ಪ್ರಾಂಶುಪಾಲ ರಾಧೆ ಶ್ಯಾಂ ಯಾದವ್‌ರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು.
ಬಿಸಿಯೂಟಕ್ಕೆ ರೊಟ್ಟಿ ಜೊತೆ ಉಪ್ಪು; ವರದಿ ಮಾಡಿದವನ ಮೇಲೆ ಕೇಸು
ಈ ವೇಳೆ ಪ್ರಾಂಶುಪಾಲ ಜೈಸ್ವಾಲ್ ವಿರುದ್ಧ ದೂರು ದಾಖಲಿಸಿದ್ದು, ಆಗಾಗ್ಗೆ ಶಾಲೆಗೆ ಬಂದು ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದ. ಪತ್ರಿಕೆಗೆ ಚಂದಾದಾರರಾಗುವಂತೆ ಒತ್ತಾಯ ಮಾಡುತ್ತಿದ್ದ. ಕೆಲ ವಿದ್ಯಾರ್ಥಿಗಳೊಂದಿಗೆ ನೆಲ ಒರೆಸುವಂತೆ ಹೇಳಿ ಚಿತ್ರೀಕರಣ ಮಾಡಿದ್ದ ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ ಜೈಸ್ವಾಲ್‌ನನ್ನು ಬಂಧಿಸಿದ್ದಾರೆ.
