ಲಖನೌ (ಸೆ. 04): ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ರೋಟಿ ಜೊತೆಗೆ ಪಲ್ಯದ ಬದಲಿಗೆ ಬರೀ ಉಪ್ಪು ನೀಡಲಾಗುತ್ತಿದೆ ಎಂಬ ವರದಿ ಪ್ರಸಾರ ಮಾಡಿದ್ದ ಪತ್ರಕರ್ತ ಹಾಗೂ ವಿಷಯ ತಿಳಿದ ಬಳಿಕ ಸಮಸ್ಯೆ ಪರಿಹರಿಸದೇ, ವಿಷಯವನ್ನು ಪತ್ರಕರ್ತನಿಗೆ ತಿಳಿಸಿ ಸುದ್ದಿ ಮಾಡಿಸಿದ ಕಾರಣಕ್ಕೆ ಗ್ರಾಮ ಮುಖ್ಯಸ್ಥನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮಿರ್ಜಾಪುರ ಜಿಲ್ಲೆಯ ಜಮಾಲ್‌ಪುರ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ನಡುವೆ ಕೇಸು ದಾಖಲಿಸಿದ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಪತ್ರಕರ್ತನ ವಿರುದ್ಧದ ಪ್ರಕರಣವು ನ್ಯಾಯ ಹಾಗೂ ನಿರ್ಭೀತ ಪತ್ರಿಕೋದ್ಯಮ ಮೇಲಿನ ದಾಳಿಯಾಗಿದ್ದು, ಅಭಿವ್ಯಕ್ತ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬರೂ ಒಂದಾಗಬೇಕು ಎಂದು ಮಾಜಿ ಸಿಎಂ ಅಖಿಲೇಶ್‌ ಯಾದವ್‌, ಕರೆ ನೀಡಿದರು.

ಈ ನಡುವೆ ಪ್ರಕರಣವು ಭಾರೀ ಟೀಕೆಗೆ ಗುರಿಯಾಗುತ್ತಲೇ, ಯಾವ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.