ಲಕ್ನೋ(ಜು.19): ದೇಶಾದ್ಯಂತ ಹಲವೆಡೆ ನೀರಿನ ಅಭಾವದಿಂದ ಜನ ತತ್ತರಿಸಿದ್ದು, ಹಲವೆಡೆ ನೀರಿಂಗಿಸುವ ಕಾರ್ಯ, ಇಂಗು ಗುಂಡಿಗಳನ್ನು ಮಾಡುವ ಕೆಲಸ ಭರದಿಂದ ಸಾಗಿದೆ. ಯಾವುದೇ ಖರ್ಚಿಲ್ಲದೆ, ಯಾವುದೇ ಶ್ರಮವಿಲ್ಲದೆಯೇ ನೀರುಳಿಸುವ ಕ್ರಿಯೇಟಿವ್ ಐಡಿಯಾವನ್ನು ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮುಂದಿಟ್ಟಿದೆ.

ಮುಂದಿನ ದಿನಗಳಲ್ಲಿ ನೀರಿನ ಅಭಾವವನ್ನು ತಡೆಯಲು ನೀರನ್ನು ಮಿತವಾಗಿ ಬಳಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಲಕ್ನೋ ರಾಜ್ಯ ಸರ್ಕಾರಿ ಕಾರ್ಯಾಲಯದಲ್ಲಿ ಅರ್ಧ ಗ್ಲಾಸ್ ನೀರಿಡಲು ಸರ್ಕಾರ ನಿರ್ಧರಿಸಿದ್ದು, ಇದು ನೀರನ್ನು ವ್ಯರ್ಥ ಮಾಡುವುದಕ್ಕೆ ಕಡಿವಾಣ ಹಾಕಿದಂತಾಗಿದೆ.

ಅರ್ಧ ಗ್ಲಾಸ್ ನೀರನ್ನು ಮಾತ್ರ ಇಡಬೇಕು. ಹೀಗಾಗಿ ಜನ ನೀರು ವ್ಯರ್ಥ ಮಾಡುವುದಿಲ್ಲ ಎಂದು ಸ್ವೀಕರ್ ಸೂಚಿಸಿರುವುದಾಗಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ದುಬೆ ಹೇಳಿದ್ದಾರೆ. ಯಾವುದೇ ವ್ಯಕ್ತಿ ಹೆಚ್ಚು ನೀರು ಕೇಳಿದಲ್ಲಿ ಕೊಡಲಾಗುತ್ತದೆ. ಆದರೆ ಆರಂಭದ ಹಂತದಲ್ಲಿ ಅರ್ಧ ಗ್ಲಾಸ್ ನೀರನ್ನಷ್ಟೇ ಇಡಬೇಕು ಎಂದು ಸೂಚಿಸಲಾಗಿದೆ.