ನವದೆಹಲಿ (ಸೆ. 20): ಸನ್ಯಾಸಿಯಾಗಿದ್ದ ಯೋಗಿ ಆದಿತ್ಯನಾಥ ಅವರು 2017ರಲ್ಲಿ ಮುಖ್ಯಮಂತ್ರಿಯಾದಾಗ ದೇಶಕ್ಕೆ ದೇಶವೇ ಅಚ್ಚರಿ ಪಟ್ಟಿತ್ತು. ಅವರು ಸಿಎಂ ಆಗಿದ್ದು ಹೇಗೆ ಎಂಬುದು ಈವರೆಗೂ ಕುತೂಹಲವಾಗಿಯೇ ಉಳಿದಿದೆ. ಅಧಿಕಾರಾವಧಿಯಲ್ಲಿ ಎರಡೂವರೆ ವರ್ಷಗಳನ್ನು ಗುರುವಾರವಷ್ಟೇ ಪೂರ್ಣಗೊಳಿಸಿರುವ ಯೋಗಿ ಅವರ ಆ ಕುತೂಹಲವನ್ನು ಬಹಿರಂಗಪಡಿಸಿದ್ದಾರೆ.

ವಿಶೇಷ ವಿಮಾನ ಕಳುಹಿಸುತ್ತೇನೆ, ಯಾರಿಗೂ ವಿಷಯ ತಿಳಿಸದೇ ದಿಲ್ಲಿಗೆ ಬನ್ನಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನೀಡಿದ್ದ ಸೂಚನೆಯನ್ನೂ ಹೇಳಿಕೊಂಡಿದ್ದಾರೆ.

ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

ಯೋಗಿ ಹೇಳಿದ್ದಿಷ್ಟು:

2017ರ ಫೆಬ್ರವರಿಯಲ್ಲಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಕರೆ ಮಾಡಿ ಮಾರಿಷಸ್‌ಗೆ ಸಂಸದರ ನಿಯೋಗ ಒಯ್ಯಲು ಸೂಚಿಸಿದರು. ‘ಮಾ.6ರವರೆಗೂ ಚುನಾವಣೆ ಪ್ರಚಾರ ಇದೆ. ಹೋಗಲು ಆಗುವುದಿಲ್ಲ’ ಎಂದು ತಿಳಿಸಿದೆ. ‘ಆನಂತರವೇ ಹೋಗಿ’ ಎಂದರು. ಮಾ.8ರಂದು ಚುನಾವಣೆ ಮುಗಿಯಿತು. ಅಂದು ದೆಹಲಿಗೆ ಹೋದೆ.

ಅದಾಗಲೇ ಕಳುಹಿಸಿದ್ದ ನನ್ನ ಪಾಸ್‌ಪೋರ್ಟ್‌ ಅನ್ನು ಪ್ರಧಾನಿ ಕಾರ್ಯಾಲಯ ವಾಪಸ್‌ ಕಳಿಸಿ, ಮಾ.11ರ ಎಣಿಕೆ ದಿನ ಉತ್ತರಪ್ರದೇಶದಲ್ಲಿರುವಂತೆ ಸೂಚಿಸಿತ್ತು. ಬಿಜೆಪಿ ಭರ್ಜರಿಯಾಗಿ ಗೆದ್ದಿತ್ತು.

ಮಾ.16ರಂದು ಸಂಸದೀಯ ಪಕ್ಷದ ಸಭೆ ಇತ್ತು. ಪಕ್ಷಾಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿದೆ. ಮಾಮೂಲಿಯಂತೆ ಮಾತುಕತೆ ನಡೆಯಿತು. ‘ದೆಹಲಿ ಬಿಟ್ಟು ಹೋಗಬೇಡಿ, ಮಾತನಾಡುವುದಿದೆ’ ಎಂದು ಶಾ ಹೇಳಿದರು. ಚುನಾವಣೆ ಮುಗಿದಿದೆ, ಫಲಿತಾಂಶ ಬಂದಿದೆ, ನನ್ನ ಜತೆ ಅವರೇನು ಮಾತನಾಡುವುದಿದೆ ಎಂದು ಭಾವಿಸಿ 16ರಂದೇ ಗೋರಖ್‌ಪುರಕ್ಕೆ ಹೊರಟುಬಿಟ್ಟೆ.

ದೇಶದ ಒಳಗಿನ ವಿಧ್ವಂಸಕರ ಮಟ್ಟಕ್ಕೆ ಬಿಜೆಪಿ MLA ಖಾಸಗಿ ಸೇನೆ, ಬೆಂಗ್ಳೂರಲ್ಲಿ ತರಬೇತಿ

ಅದೇ ದಿನ ಸಂಜೆ ಅಮಿತ್‌ ಶಾ ಅವರಿಂದ ಫೋನ್‌. ‘ಎಲ್ಲಿದ್ದೀರಿ’ ಅಂತ ಕೇಳಿದರು. ‘ಗೋರಖ್‌ಪುರ’ ಎಂದೆ. ‘ನಾನು ಹೇಳಿದ್ದರೂ ಏಕೆ ಹೋದಿರಿ’ ಎಂದು ಪ್ರಶ್ನಿಸಿದರು. ‘ದೆಹಲಿಯಲ್ಲಿ ಏನೂ ಕೆಲಸ ಇರಲಿಲ್ಲ, ಅದಕ್ಕೇ ವಾಪಸ್‌ ಬಂದೆ’ ಎಂದೆ. ‘ದಿಲ್ಲಿಗೆ ಬನ್ನಿ. ತುರ್ತು ಇದೆ. ಮಾತನಾಡಬೇಕು’ ಎಂದರು.

ತಕ್ಷಣಕ್ಕೆ ರೈಲು ಅಥವಾ ವಿಮಾನ ಇರಲಿಲ್ಲ. ‘ಬೆಳಗ್ಗೆಯೇ ನಿಮ್ಮನ್ನು ಕರೆತರಲು ಬಾಡಿಗೆ ವಿಮಾನ ಬರುತ್ತದೆ. ಸುಮ್ಮನೆ ದಿಲ್ಲಿಗೆ ಬನ್ನಿ, ಈ ವಿಷಯ ಯಾರಿಗೂ ಹೇಳಬೇಡಿ’ ಎಂದು ಅಮಿತ್‌ ಶಾ ಹೇಳಿದರು. 17ರಂದು ಬೆಳಗ್ಗೆ 11ರ ವೇಳೆಗೆ ದೆಹಲಿ ತಲುಪಿದೆ. ‘ಇದೇ ವಿಮಾನದಲ್ಲಿ ಲಖನೌಗೆ ಹೊರಟುಬಿಡಿ. ಸಂಜೆ 4ಕ್ಕೆ ಶಾಸಕಾಂಗ ಪಕ್ಷದ ಸಭೆ ಇದೆ. ಶಾಸಕರು ತಮ್ಮ ನಾಯಕನನ್ನಾಗಿ ನಿಮ್ಮನ್ನು ಚುನಾಯಿಸುತ್ತಾರೆ. ನಾಳೆ ಪ್ರಮಾಣವಚನ ತೆಗೆದುಕೊಳ್ಳಬೇಕು’ ಎಂದು ಶಾ ಸೂಚಿಸಿದರು ಯೋಗಿ ಸ್ಮರಿಸಿದ್ದಾರೆ.