ಇ- ಸಿಗರೆಟ್ ಮಾರಿದರೆ 1 ಲಕ್ಷ ದಂಡ, ಜೈಲು!
ಇ- ಸಿಗರೆಟ್ ಮಾರಿದರೆ 1 ಲಕ್ಷ ದಂಡ, ಜೈಲು! ಕೇಂದ್ರದಿಂದ ಸುಗ್ರೀವಾಜ್ಞೆ ಸಂಚಾರಿ ನಿಯಮ ರೀತಿ ಭಾರಿ ದಂಡ | ಮೊದಲ ಬಾರಿ ಅಪರಾಧಕ್ಕೆ ಒಂದು ವರ್ಷ ಜೈಲು, 1 ಲಕ್ಷ ರು. ದಂಡ | ಅಪರಾಧ ಪುರಾವರ್ತನೆಗೆ ಮೂರು ವರ್ಷ ಜೈಲು, 5 ಲಕ್ಷ ರು. ದಂಡ
ನವದೆಹಲಿ (ಸೆ. 20): ಆರೋಗ್ಯಕ್ಕೆ ಮಾರಕವಾಗಿರುವ ಇ-ಸಿಗರೆಟ್ ನಿಷೇಧಿಸಲು ಬುಧವಾರವಷ್ಟೇ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಗುರುವಾರ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ. ಸಂಚಾರ ನಿಯಮಗಳಿಗೆ ಭಾರಿ ದಂಡ ವಿಧಿಸಿ ಸುದ್ದಿಯಾಗಿರುವ ಕೇಂದ್ರ ಸರ್ಕಾರ ಇ-ಸಿಗರೆಟ್ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ, ಜಾಹೀರಾತಿಗೂ ಭಾರಿ ಮೊತ್ತದ ದಂಡವನ್ನು ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿದೆ.
ಮೊದಲ ಬಾರಿಯ ತಪ್ಪಿತಸ್ಥರಿಗೆ ಒಂದು ವರ್ಷದವರೆಗೂ ಜೈಲು ಹಾಗೂ 1 ಲಕ್ಷ ರು. ದಂಡ ವಿಧಿಸಬಹುದಾಗಿದೆ. ಅಪರಾಧ ಪುನರಾವರ್ತನೆಯಾದರೆ ಮೂರು ವರ್ಷಗಳವರೆಗೆ ಜೈಲು ಹಾಗೂ 5 ಲಕ್ಷ ರು. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಇ- ಸಿಗರೆಟ್ ದಾಸ್ತಾನು ಇಟ್ಟಿದ್ದು ಕಂಡು ಬಂದರೆ ಆರು ತಿಂಗಳು ಜೈಲು ಹಾಗೂ 50 ಸಾವಿರ ರು. ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಅಲ್ಲದೇ ಅಕ್ರಮವಾಗಿ ಇ- ಸಿಗರೆಟ್ ದಾಸ್ತಾನು ಇಟ್ಟಮಳಿಗೆಗಳ ಮೇಲೆ ಶೋಧ ನಡೆಸಲು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಅಧಿಕಾರಿಗಳಿಗೆ ಸುಗ್ರೀವಾಜ್ಞೆ ಅಧಿಕಾರವನ್ನು ನೀಡಲಾಗಿದೆ. ಅಂಗಡಿಕಾರರು ತಮ್ಮ ಬಳಿ ಇ- ಸಿಗರೆಟ್ ದಾಸ್ತಾನು ಇಟ್ಟುಕೊಂಡಿದ್ದರೆ ಕೂಡಲೇ ಸ್ವಯಂಪ್ರೇರಿತವಾಗಿ ಅವುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇ- ಸಿಗರೆಟ್‌ಗಳನ್ನು ಬಳಕೆಯನ್ನು ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಬುಧವಾರದಂದು ನಿರ್ಣಯ ಅಂಗೀಕರಿಸಿತ್ತು. ಇದೇ ವೇಳೆ ಇ- ಸಿಗರೆಟ್ ಬಳಕೆದಾರರ ಸಂಘಟನೆ ಅಸೋಸಿಯೇಷನ್ ಆಫ್ ವ್ಯಾಪರ್ಸ್ ಇಂಡಿಯಾ ಸರ್ಕಾರದ ನಿರ್ಧಾರವನ್ನು ಖಂಡಿಸಿದೆ. ಇದು ಭಾರತದಲ್ಲಿರುವ 11 ಕೋಟಿ ಇ- ಸಿಗರೆಟ್ ಬಳಕೆದಾರರಿಗೆ ಕರಾಳ ದಿನ ಎಂದು ಆರೋಪಿಸಿದೆ.
ಯಾವುದು ಅಪರಾಧ?
ಇ-ಸಿಗರೆಟ್ ಉತ್ಪಾದನೆ, ಆಮದು, ರಫ್ತು, ಸಾಗಣೆ, ಮಾರಾಟ ಅಥವಾ ಜಾಹೀರಾತು ನೀಡುವುದು ಹಾಗೂ ದಾಸ್ತಾನು ಮಾಡಿಡುವುದು.
ಶಿಕ್ಷೆ ಏನು?
- ಮೊದಲ ಬಾರಿ ಅಪರಾಧಕ್ಕೆ ಒಂದು ವರ್ಷ ಜೈಲು, 1 ಲಕ್ಷ ರು. ದಂಡ
- ಅಪರಾಧ ಪುರಾವರ್ತನೆಗೆ ಮೂರು ವರ್ಷ ಜೈಲು, 5 ಲಕ್ಷ ರು. ದಂಡ
- ಇ- ಸಿಗರೆಟ್ ದಾಸ್ತಾನು ಇಟ್ಟಿದ್ದರೆ 6 ತಿಂಗಳು ಜೈಲು, 50 ಸಾವಿರ ರು. ದಂಡ