ನವದೆಹಲಿ[ಡಿ.21]: ಹನುಮಂತನಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದಲಿತ ಪಟ್ಟಕಟ್ಟಿದರು ಎನ್ನಲಾದ ವರದಿಗಳು ಇತ್ತೀಚೆಗೆ ವಿವಾದ ಸೃಷ್ಟಿಸಿದ್ದವು. ಇದರ ಬೆನ್ನಲ್ಲೇ ಈಗ ಬಿಜೆಪಿಯ ಮುಸ್ಲಿಂ ಸಂಸದರೊಬ್ಬರು ‘ಹನುಮಂತ ಮುಸಲ್ಮಾನ’ ಎಂಬ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಿದ್ದಾರೆ.

ಇವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸುದ್ದಿಸಂಸ್ಥೆಯೊಂದರ ಜತೆ ಗುರುವಾರ ಮಾತನಾಡಿದ ಉತ್ತರಪ್ರದೇಶ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಬುಕ್ಕಲ್‌ ನವಾಬ್‌, ‘ಹನುಮಾನ್‌ ಮುಸಲ್ಮಾನ ಎಂದು ನಾವು ನಂಬುತ್ತೇವೆ. ಅದಕ್ಕೆಂದೇ ಆತನ ಹೆಸರನ್ನೇ ಹೋಲುವಂತೆ ಮುಸ್ಲಿಮರಲ್ಲಿ ರೆಹಮಾನ್‌, ರಮಜಾನ್‌, ಫರ್ಮಾನ್‌, ಝೀಶಾನ್‌, ಕುರ್ಬಾನ್‌ ಎಂಬ ಹೆಸರುಗಳು ಸೃಷ್ಟಿಯಾಗಿವೆ. ಇಂತಹ ಎಲ್ಲ ಹೆಸರುಗಳು ಹನುಮಾನ್‌ನನ್ನೇ ಹೋಲುವಂತಿವೆ. ಇಸ್ಲಾಂನಲ್ಲಿ ಮಾತ್ರ ಇಂತಹ ಹೆಸರುಗಳಿವೆ’ ಎಂದರು. ‘ಹನುಮಂತ ಇರದೇ ಹೋಗಿದ್ದರೆ ಈ ಮುಸ್ಲಿಮರಲ್ಲಿ ಈ ಹೆಸರುಗಳು ಸೃಷ್ಟಿಯಾಗುತ್ತಿರಲಿಲ್ಲ’ ಎಂದೂ ಅವರು ಹೇಳಿದರು.

ಸದ್ಯ ಈ ಬಿಜೆಪಿ ನಾಯಕ ತಮ್ಮ ಹೇಳಿಕೆಯಿಂದ ನಗೆಪಾಟಲಿಗೀಡಾಗಿದ್ದರೂ, ಇವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.