ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿ ರಾಷ್ಟ್ರವನ್ನು ಆಳಿದವರೆಲ್ಲರೂ ವಿಚಾರಗಳ ನೆಲೆಗಟ್ಟಿನಲ್ಲಿ ಸಮಾನತೆಯನ್ನು ಪ್ರತಿಪಾದಿಸಿದವರಾಗಿದ್ದರು. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿಯವರು ವಿಚಾರಗಳಿಗಿಂತ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಟೀಕಿಸಿದರು.

ಕೊಪ್ಪ (ನ.07): ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿ ರಾಷ್ಟ್ರವನ್ನು ಆಳಿದವರೆಲ್ಲರೂ ವಿಚಾರಗಳ ನೆಲೆಗಟ್ಟಿನಲ್ಲಿ ಸಮಾನತೆಯನ್ನು ಪ್ರತಿಪಾದಿಸಿದವರಾಗಿದ್ದರು. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿಯವರು ವಿಚಾರಗಳಿಗಿಂತ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಟೀಕಿಸಿದರು.

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಭೂಸ್ವಾನ ಮಸೂದೆ, ಖಾಸಗಿ ಬ್ಯಾಂಕ್ ಮತ್ತು ಬಸ್ಸುಗಳ ರಾಷ್ಟ್ರೀಕರಣ ಯೋಜನೆ, ಜೀತಮುಕ್ತಿ, 18 ವರ್ಷದ ಯುವಕರಿಗೆ ಮತದಾನದ ಹಕ್ಕು ಹೀಗೆಹಲವಾರು ಶಾಶ್ವತ ಯೋಜನೆಗಳನ್ನು ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ನೀಡಿದೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೊರದೇಶದಲ್ಲಿದ್ದ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷದಂತೆ ನೀಡುತ್ತೇನೆ ಎಂದು ಭರವಸೆಗಳ ಮೂಲಕ ಪ್ರಧಾನಿಯಾದ ಮೋದಿ ಇಲ್ಲಿ ಯವರೆಗೂ ವಿದೇಶದಿಂದ ಯಾವುದೇ ಕಪ್ಪುಹಣವನ್ನು ನಮ್ಮ ದೇಶಕ್ಕೆ ತಾರದೇ ಮತದಾರರಲ್ಲಿ ನಿರಾಸೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಹೆಚ್ಚಿನ ಸಮಯ ವಿದೇಶದಲ್ಲೇ ಇರುವ ನಮ್ಮ ಪ್ರಧಾನಿಯನ್ನು ಭಾರತಕ್ಕೆ ಕರೆ ತರುವುದೇ ಒಂದು ಸಾಹಸವಾಗಿದೆ ಎಂದ ಅವರು, ನೋಟು ರದ್ಧತಿ, ಜಿಎಸಟಿಗಳಿಂದ ಸಾಮಾನ್ಯ ಜನರು ತೊಂದರೆಪಡುವಂತಾಗಿದೆ. ಸದಾಕಾಲವೂ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುವ ಪ್ರಧಾನಿ ದೇಶದ ಅಭಿವೃದ್ಧಿಯನ್ನೇ ಮರೆತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಬಡ ಜನರಿಗೆ ನಿವೇಶನ ಹಂಚಿಕೆ, ವಾಸಿಸುವವನೇ ಮನೆಯೊಡೆಯ ಹೀಗೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ತಾರತಮ್ಯವಿಲ್ಲದೆ ನೀಡಿದೆ. ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರೆಡೆಗೆ ತಲುಪಿಸಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದರು.