ಜಾಮ್‌ನಗರ[ಫೆ.05]: ರಫೇಲ್‌ ಯುದ್ಧವಿಮಾನಗಳು ಇದ್ದಿದ್ದರೆ ಪಾಕಿಸ್ತಾನದ ವಿರುದ್ಧ ವಾಯುಪಡೆಯ ದಾಳಿ ಇನ್ನಷ್ಟುತೀವ್ರವಾಗಿರುತ್ತಿತ್ತು ಎಂಬ ತಮ್ಮ ಹೇಳಿಕೆಯನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, ಸ್ವಲ್ಪ ಕಾಮನ್‌ ಸೆನ್ಸ್‌ ಬಳಸಿ ಎಂದು ಕಿಡಿ ಕಾರಿದ್ದಾರೆ.

‘ಸರಿಯಾದ ಸಮಯಕ್ಕೆ ರಫೇಲ್‌ ಖರೀದಿಸಿದ್ದರೆ ಫೆ.27ರ ದಾಳಿ ಬೇರೆಯದೇ ರೀತಿಯಲ್ಲಿರುತ್ತಿತ್ತು ಎಂದು ನಾನು ಹೇಳಿದ್ದೆ. ಆದರೆ, ಮೋದಿ ನಮ್ಮ ವಾಯುಪಡೆಯ ಬಲವನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಇವರು ಹೇಳುತ್ತಿದ್ದಾರೆ. ದಯವಿಟ್ಟು ಸ್ವಲ್ಪ ಕಾಮನ್‌ ಸೆನ್ಸ್‌ ಬಳಸಿ. ನಾನು ಹೇಳಿದ್ದರ ಅರ್ಥ- ಸರಿಯಾದ ಸಮಯಕ್ಕೆ ನಾವು ರಫೇಲ್‌ ಖರೀದಿಸಿದ್ದರೆ ನಮ್ಮ ಯಾವುದೇ ಯುದ್ಧವಿಮಾನವನ್ನು ವಿರೋಧಿಗಳು ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವರ ಯುದ್ಧವಿಮಾನಗಳು ಉಳಿಯುತ್ತಿರಲಿಲ್ಲ ಎಂದು’ ಎಂದು ತಿರುಗೇಟು ನೀಡಿದ್ದಾರೆ.

ಜೈಷ್‌-ಎ-ಮೊಹಮ್ಮದ್‌ ವಿರುದ್ಧದ ದಾಳಿಗೆ ಸಾಕ್ಷ್ಯ ಕೇಳುತ್ತಿರುವವರಿಗೆ ಟಾಂಗ್‌ ನೀಡಿದ ಅವರು, ನಾವು ಭಯೋತ್ಪಾದನೆಯನ್ನು ಹೋಗಲಾಡಿಸಲು ಯತ್ನಿಸುತ್ತಿದ್ದರೆ ಅವರು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ನೆರೆದೇಶದಲ್ಲಿ ಭಯೋತ್ಪಾದನೆಯ ಬೇರುಗಳಿವೆ. ಬೇರಿನಿಂದಲೇ ಆ ರೋಗವನ್ನು ಗುಣಪಡಿಸಬೇಕೋ ಬೇಡವೋ ಎಂದು ಪ್ರಶ್ನಿಸಿದ್ದಾರೆ.