ವಾಷಿಂಗ್ಟನ್(ಅ.10): ಅಫ್ಘಾನಿಸ್ತಾನ್, ಇರಾಕ್, ಲಿಬಿಯಾ ಹಾಗೂ ಸಿರಿಯಾ ಯುದ್ಧಗಳನ್ನು, ಅಮೆರಿಕದ ಐತಿಹಾಸಿಕ ಪ್ರಮಾದ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಪ್ಪೊಪ್ಪಿಕೊಂಡಿದ್ದಾರೆ.

ಮಧ್ಯಪ್ರಾಚ್ಯ ಸಮಸ್ಯೆಯನ್ನು ಸುಖಾ ಸುಮ್ಮನೆ ಮೈಮೇಲೆ ಎಳೆದುಕೊಂಡ ಅಮೆರಿಕ, ನಿರಂತರ ಯುದ್ಧದಲ್ಲಿ ತೊಡಗಿ ತಪ್ಪು ಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ

ಅಮೆರಿಕ ದಶಕಗಳಿಂದ ನಿರಂತರವಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದಲ್ಲಿ ನಿರತವಾಗಿದ್ದು, ಇದುವರೆಗೆ 8 ಟ್ರಿಲಿಯನ್ ಡಾಲರ್ ಹಣವನ್ನು ಹಾಗೂ ಅಸಂಖ್ಯ ಧೀರ ಸೈನಿಕರನ್ನು ಕಳೆದುಕೊಂಡಿದೆ ಎಂದು ಟ್ರಂಪ್ ಖೇದ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಇರಾಕ್ ಯುದ್ಧವನ್ನು ಪ್ರಸ್ತಾಪಿಸಿರುವ ಅಮೆರಿಕ ಅಧ್ಯಕ್ಷ, ಸಾಮೂಹಿಕ ವಿನಾಶದ ಅಸ್ತ್ರ ಇದೆ ಎಂದು ಸುಳ್ಳು ಹೇಳಿ ಯುದ್ಧ ಪ್ರಾರಂಭಿಸಿದ್ದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಇದೇ ಕಾರಣಕ್ಕೆ ತಮ್ಮ ಸರ್ಕಾರ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಸೈನ್ಯವನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದು, ನಮ್ಮ ಹೀರೋಗಳು ಮನೆಗೆ ಸುರಕ್ಷಿತವಾಗಿ ಮರಳುವುದುನ್ನು ಕಾತರದಿಂದ ಕಾಯುತ್ತಿರುವುದಾಗಿ ಮಾರ್ಮಿಕವಾಗಿ ಹೇಳಿದ್ದಾರೆ.

ಮಧ್ಯಪ್ರಾಚ್ಯ ‘ಉರಿಯಲು’ ಕಾರಣ?:

ಛೇ! ಅಲ್ಲೇನಿದೆ.. ಬರೀ ಮರಳುಗಾಡೊಂದನ್ನು ಬಿಟ್ಟು ಎಂದು ಉಡಾಫೆ ಮಾಡಲಾಗಿದ್ದ ಸಂಪೂರ್ಣ ಮಧ್ಯಪ್ರಾಚ್ಯ, ಕಚ್ಚಾತೈಲದ ಸಮೃದ್ಧ ಆಗರ ಎಂದರಿತಾಗಲೇ ಸಮಸ್ಯೆಯ ಕುಡಿ ಚಿಗುರಿತು.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅವಿಚ್ಛಿನ್ನವಾಗಿ ಹರಡಿರುವ ಕಚ್ಚಾತೈಲ ಬಾವಿಗಳು ಈ ಭಾಗದ ಭಾಗ್ಯದ ಬಾಗಿಲನ್ನು ತೆರೆದವು. ಜೊತೆಗೆ ದ್ವೇಷದ, ಹಗೆತನದ ಸಂಬಂಧವನ್ನು ಮನೆಯೋಳಗೆ ತಂದು ಬಿಟ್ಟವು.

ದ್ರವರೂಪದ ಬಂಗಾರ ಎಂದೇ ಪರಿಗಣಿತವಾದ ಕಚ್ಚಾತೈಲದ ಬಾವಿಗಳ ಮೇಲೆ ವಿಶ್ವದ ದೊಡ್ಡಣ್ಣ ಅಮೆರಿಕದ ವಕ್ರದೃಷ್ಟಿ ಬಿದ್ದಾಗಲಂತೂ ತೈಲ ಬಾವಿಗಳು ಹೊತ್ತಿ ಉರಿಯತೊಡಗಿದವು.

ಪ್ರಮುಖವಾಗಿ 90ರ ದಶಕದ ಗಲ್ಫ್ ಯುದ್ಧದಿಂದ ಶುರುವಾದ ಅವನತಿಯ ಸರಮಾಲೆ ಇಂದಿಗೂ ನಿಂತಿಲ್ಲ. ಕುವೈತ್-ಇರಾಕ್ ವೈಮನಸ್ಸು, ಸೌದಿ-ಯೆಮೆನ್ ಜಗಳ, ಇರಾನ್’ನ ಅಣು ಯೋಜನೆ, ಸದ್ದಾಂ ಸದೆಬಡಿಯುವ ನೆಪ, ಗಡಾಫಿ ಮುಗಿಸುವ ಛಲ, ಲಾಡೆನ್ ಇಲ್ಲವಾಗಿಸುವ ಹಂಬಲ, ಹೀಗೆ ಹತ್ತು ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಅಮೆರಿಕ ಮಧ್ಯಪ್ರಾಚ್ಯದಲ್ಲಿ ಯುದ್ಧದ ಸರಮಾಲೆಯನ್ನೇ ಹೆಣೆಯಿತು.

ಈ ಯುದ್ಧಗಳಿಂದ ಅಮೆರಿಕ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬುದು ಖುದ್ದು ಅಮೆರಿಕಕ್ಕೂ ಗೊತ್ತು. ಇದೀಗ ಈ ತಪ್ಪನ್ನು ಸರಿಪಡಿಸುವತ್ತ ಅಮೆರಿಕ ಮುಂದಡಿ ಇಟ್ಟಿರುವುದು ನಿಜಕ್ಕೂ ಪ್ರಶಸಂನೀಯ.