ಪುಲ್ವಾಮ ದಾಳಿಯಲ್ಲಿ ಪಾಕ್ ಕೈವಾಡ : ಅಮೆರಿಕ ಶಂಕೆ
ಜಮ್ಮು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಉಗ್ರರ ಕೃತ್ಯದಲ್ಲಿ 42 ಯೋಧರು ವೀರಮರಣವನ್ನಪ್ಪಿದ್ದಾರೆ. ಪಾಕ್ ಮೂಲದ ಉಗ್ರ ಸಂಘಟನೆ ಜೈಷ್ ಇ ಮೊಹಮ್ಮದ್ ದಾಳಿ ಹೊಣೆ ಹೊತ್ತಿದ್ದು, ಇದರ ಹಿಂದೆ ಪಾಕ್ ಗುಪ್ತಚರ ಸಂಸ್ಥೆಯ ಕೈವಾಡವಿದೆ ಎಂದು ಶಂಕಿಸಲಾಗಿದೆ.
ವಾಷಿಂಗ್ಟನ್ : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಉಗ್ರ ಕೃತ್ಯದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಕೈವಾಡ ಇರುವುದಾಗಿ ಅಮೆರಿಕನ್ ತಜ್ಞರು ಶಂಕಿಸಿದ್ದಾರೆ.ಪಾಕ್ ಮೂಲದ ಉಗ್ರ ಸಂಘಟನೆ ಜೈಷ್ ಇ ಮೊಹಮ್ಮದ್ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಹೊಣೆ ಹೊತ್ತಿದೆ.
ಪೈಶಾಚಿಕ ಉಗ್ರ ಕೃತ್ಯ ಎಸಗುತ್ತಿರುವ ಉಗ್ರ ಸಂಘಟನೆ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಇದರಿಂದ ಪಾಕ್ ಗುಪ್ತಚರ ಸಂಸ್ಥೆ ಈ ದಾಳಿಗೆ ಬೆಂಬಲ ನೀಡಿದ್ದು, ಅದರ ಹಿಂದಿನ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿರಬಹುದು ಎಂದು ಮಾಜಿ ಸಿಐಎ ಅನಾಲಿಸ್ಟ್ ಬ್ರೂಸ್ ರೈಡೆಲ್ ಹೇಳಿದ್ದಾರೆ.
ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದ ಬಳಿಕ ಪಾಕ್ ಮೂಲದ ಉಗ್ರ ಸಂಘಟನೆಯೊಂದು ಈ ರೀತಿ ಪಾತಕಿ ಕೃತ್ಯ ಎಸಗಿದ್ದು, 2 ದಶಕಗಳಲ್ಲೇ ಭಾರತೀಯ ಸೇನೆ ಮೇಲೆ ನಡೆದ ಭೀಕರ ದಾಳಿ ಇದಾಗಿದೆ. ಇದು ಇಮ್ರಾನ್ ಖಾನ್ ಗೆ ಮೊದಲ ದೊಡ್ಡ ಸವಾಲು ಎಂದು ತಜ್ಞರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು, ಪಾಕಿಸ್ತಾನವು ಉಗ್ರ ಸಂಘಟನೆಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಸದ್ಯದ ಪರಿಸ್ಥಿತಿಯು ಭಾರತ ಹಾಗೂ ಪಾಕಿಸ್ತಾನ ನಡುವಿನ ಅತ್ಯಂತ ಬಿಗುವಿನ ಸ್ಥಿತಿ ನಿರ್ಮಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.