ಡಮಾಸ್ಕಸ್‌ (ಮಾ. 12): ಸಿರಿಯಾದಲ್ಲಿ ಐಸಿಸ್‌ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಬೆಂಬಲಿತ ಸೇನಾ ಪಡೆಗಳು ಭಾನುವಾರದಿಂದ ಅಂತಿಮ ಕಾರ್ಯಾಚರಣೆಗೆ ಇಳಿದಿವೆ.

ಒಂದು ಕಾಲದಲ್ಲಿ ಸಿರಿಯಾದ ಬಹುತೇಕ ಭಾಗವನ್ನು ನಿಯಂತ್ರಣಕ್ಕೆ ಪಡೆದುಕೊಂಡಿದ್ದ ಐಸಿಸ್‌ ಉಗ್ರರು, ಇದೀಗ ನದಿಯೊಂದರ ಪಕ್ಕದ ಬಾಗಹೌಜ್‌ ಎಂಬ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದಾರೆ.

ಸರ್ಕಾರ ವಶಪಡಿಸಿಕೊಂಡ ಪ್ರದೇಶಗಳಲ್ಲಿ ನಾಗರಿಕರಿಗೆ ಮರಳಲು ಅವಕಾಶ ಕಲ್ಪಿಸಲು ಹಾಗೂ ಜಿಹಾದಿಗಳಿಗೆ ಶರಣಾಗಲು ಗಡುವು ನೀಡಿದ್ದ ಸಿರಿಯಾದ ಡೆಮೊಕ್ರಾಟಿಕ್‌ ಪಡೆಗಳು ಕಳೆದ ಕೆಲವು ವಾರಗಳಿಂದ ಕಾರ್ಯಾಚರಣೆಯನ್ನು ನಿಧಾನಗೊಳಿಸಿದ್ದವು.

ಇದೀಗ ಉಗ್ರರಿಗೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಅಂತಿಮ ಕಾರ್ಯಾಚರಣೆ ಕೈಗೊಳ್ಳಲು ಸರ್ಕಾರ ಅದೇಶಿಸಿದೆ. ಆದರೆ, ಬಾಗಹೌಜ್‌ ಗ್ರಾಮದಲ್ಲಿ ಸಾವಿರಾರು ನಾಗರಿಕರು ಉಳಿದುಕೊಂಡಿದ್ದು, ಉಗ್ರ ಕಪಿಮುಷ್ಟಿಯಿಂದ ಜನರನ್ನು ಖಾಲಿ ಮಾಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.