ರೊಸ್ಟೊವ್-ಆನ್-ಡಾನ್[ಜೂ.21]: ಅನುಭವಿ ಆಟಗಾರ ಲೂಯಿಸ್ ಸ್ವಾರೆಜ್ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಸೌದಿ ಅರೇಬಿಯಾ ವಿರುದ್ಧ ಉರುಗ್ವೆ ತಂಡ 1-0 ಗೋಲಿನಿಂದ ಜಯದ ನಗೆ ಬೀರಿತು. 

ಸ್ವಾರೆಜ್ ಆಡುತ್ತಿರುವ 100ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಿದ್ದು, 52ನೇ ಅಂ.ರಾ. ಗೋಲಾಗಿದೆ. ಮೊದಲ ಪಂದ್ಯದಲ್ಲಿ ಈಜಿಪ್ಟ್ ಅನ್ನು ಮಣಿಸಿದ್ದ ಉರುಗ್ವೆ, ಈ ಜಯದೊಂದಿಗೆ ಪ್ರಿಕ್ವಾರ್ಟರ್‌ನಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿತು. ಬುಧವಾರ ಇಲ್ಲಿನ ರೊಸ್ಟೊವ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಉರುಗ್ವೆ ಪಾರಮ್ಯ ಮೆರೆಯಿತು. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿದ ಉರುಗ್ವೆ ಆಟಗಾರರು ಸೌದಿ ಅರೇಬಿಯಾ ಮೇಲೆ ಒತ್ತಡ ಹೇರಿದರು. 

ಪಂದ್ಯದ 23ನೇ ನಿಮಿಷದಲ್ಲಿ ಆಕರ್ಷಕ ಗೋಲು ದಾಖಲಿಸಿದ ಸ್ವಾರೆಜ್, ಉರುಗ್ವೆ ತಂಡಕ್ಕೆ 1-0 ಮುನ್ನಡೆಯೊದಗಿಸಿದರು. ಇದಾದ ಬಳಿಕ ಗೋಲು ಗಳಿಸಲು ಉಭಯ ತಂಡಗಳಿಗೂ ಸಾಕಷ್ಟು ಅವಕಾಶ ಲಭಿಸಿದರೂ ಯಾವುದೇ ಗೋಲುಗಳು ದಾಖಲಾಗಲಿಲ್ಲ.

ಉರುಗ್ವೆಗೆ 15 ಫ್ರೀ ಕಿಕ್ ಲಭಿಸಿದರೆ, ಸೌದಿಗೆ 11 ಅವಕಾಶಗಳು ಲಭ್ಯವಾಯಿತು. ಇನ್ನು ಉರುಗ್ವೆ ಆಟಗಾರರು ಪಂದ್ಯದಲ್ಲಿ ಗೋಲುಗಾಗಿ 13 ಬಾರಿ ಯತ್ನ ನಡೆಸಿದರೆ, ಸೌದಿ ಅರೇಬಿಯಾ ಆಟಗಾರರು 8 ಬಾರಿ ಯತ್ನ ನಡೆಸಿದರು. 1-0ಯಿಂದ ಮೊದಲಾರ್ಧ ಮುಕ್ತಾಯಗೊಂಡಿತು.ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಉಭಯ ತಂಡಗಳ ಆಟಗಾರರು ಗೋಲಿಗಾಗಿ ನಡೆಸಿದ ಯತ್ನ ಫಲ ನೀಡಲಿಲ್ಲ. ಕೊನೆಗೆ ದಾಖಲಾಗಿದ್ದು ಏಕೈಕ ಗೋಲು ಮಾತ್ರ.