ಮುಂಬೈ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಉಗ್ರರ ಕೃತ್ಯವನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಹಾಗೂ, ಮರೆಯಲೂ ಬಾರದು ಎಂದು ‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ ಸಿನಿಮಾದಲ್ಲಿ ಸೇನಾಧಿಕಾರಿ ಪಾತ್ರ ನಿರ್ವಹಿಸಿದ ವಿಕ್ಕಿ ಕೌಶಾಲ್‌ ಅವರು ಹೇಳಿದ್ದಾರೆ.

ಸಿನಿಮಾ ಮತ್ತು ಟೀವಿ ಕಲಾವಿದರ ಅಸೋಸಿಯೇಷನ್‌(ಸಿಐಎನ್‌ಟಿಎಎ) ಹಾಗೂ ಆ್ಯಕ್ಟ್ ಫೆಸ್ಟ್‌ 2019 ಕಾರ್ಯಕ್ರಮದಲ್ಲಿ ಮಾತನಾಡಿದ ಕೌಶಾಲ್‌, ‘40 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದುಷ್ಕೃತ್ಯಕ್ಕೆ ಉತ್ತರ ನೀಡಬೇಕಿದೆ,’ ಎಂದು ಪ್ರತಿಪಾದಿಸಿದರು. 

ಇನ್ನು ಸರ್ಜಿಕಲ್‌ ಸ್ಟ್ರೈಕ್‌ ನಡೆಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಹೆಚ್ಚು ಜ್ಞಾನ ನನಗಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ಮಾಡಬೇಕು, ಹೀಗೆ ಆಗಬೇಕು ಎಂದು ಹೇಳುವುದು ಸುಲಭ. ಈ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ,’ ಎಂದು ಹೇಳಿದರು.