ಹೈದರಾಬಾದ್‌: ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್‌, ವಿವಿಧ ಸಮುದಾಯಗಳನ್ನು ಓಲೈಸುವ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಿದೆ. ಆದರೆ ಇಂಥ ಓಲೈಕೆ ವೇಳೆ ರಾಜ್ಯದಲ್ಲಿ ಶೇ.12.5ರಷ್ಟುಜನಸಂಖ್ಯೆ ಹೊಂದಿರುವ ಮುಸ್ಲಿಮರ ಮತಕ್ಕಾಗಿ ಕಾಂಗ್ರೆಸ್‌ ಪ್ರಸ್ತಾಪಿಸಿರುವ ಕೆಲ ಅಂಶಗಳು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಅದರಲ್ಲೂ ತೆಲುಗರ ನಾಡಿನಲ್ಲಿ ಉರ್ದುಗೆ 2ನೇ ಭಾಷೆಯ ಸ್ಥಾನಮಾನ ಮತ್ತು ಎಲ್ಲಾ ಸರ್ಕಾರಿ ಆದೇಶಗಳನ್ನು ಉರ್ದು ಭಾಷೆಯಲ್ಲಿ ಹೊರಡಿಸುವ ಪಕ್ಷದ ಭರವಸೆ ಸಾಕಷ್ಟುವಿವಾದಕ್ಕೆ ಕಾರಣವಾಗಿದೆ.

ಮುಸ್ಲಿಮರಿಗೇ ಪ್ರತ್ಯೇಕ ಶಾಲೆ, ಮುಸ್ಲಿಮರಿಗೇ ಪ್ರತ್ಯೇಕ ಆಸ್ಪತ್ರೆ- ಹೀಗೆ ತರಹೇವಾರಿ ಜಾತಿ ಓಲೈಕೆಯ ಭರವಸೆಗಳನ್ನು ನೀಡಲಾಗಿದೆ. ಇದು ವ್ಯಾಪಕ ಪರ-ವಿರೋಧ ಹೇಳಿಕೆಗಳ ಸಮರಕ್ಕೆ ನಾಂದಿ ಹಾಡಿದೆ.

ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಶೇ.12.5ರಷ್ಟುಮುಸ್ಲಿಂ ಮತದಾರರಿದ್ದಾರೆ. 42 ಕ್ಷೇತ್ರಗಳಲ್ಲಿ ಇವರೇ ನಿರ್ಣಾಯಕರು. ಹೀಗಾಗಿ ಕಾಂಗ್ರೆಸ್‌ ಹಾಗೂ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ- ಮುಸ್ಲಿಂ ಒಲೈಕೆಗೆ ನಾಮುಂದು ತಾಮುಂದು ಎಂದು ಮುನ್ನುಗ್ಗುತ್ತಿವೆ.

ಆದರೆ ಪ್ರಣಾಳಿಕೆಯಲ್ಲಿನ ಅಂಶಗಳು ಸೋರಿಕೆಯಾಗುತ್ತಿದ್ದಂತೆಯೇ ಬಿಜೆಪಿ ನಾಯಕರಾದ ಅರುಣ್‌ ಜೇಟ್ಲಿ ಹಾಗೂ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರು, ‘ಇದು ಜಾತಿ ತುಷ್ಟೀಕರಣವಾಗಿದ್ದು, ಇದನ್ನು ನಾವು ತಿರಸ್ಕರಿಸುತ್ತೇವೆ’ ಎಂದಿದ್ದಾರೆ. ಇದರ ಬೆನ್ನಲ್ಲೇ ಕೆಲ ತಿದ್ದುಪಡಿಗಳನ್ನು ಮಾಡಿ ಜನಾಕ್ರೋಶದಿಂದ ಪಾರಾಗಲು ಕಾಂಗ್ರೆಸ್‌ ಮುಂದಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಕರಡು ಪ್ರಣಾಳಿಕೆಯಲ್ಲೇನಿದೆ?:

- ಮಸೀದಿ, ಚರ್ಚ್, ದೇಗುಲಗಳಿಗೆ ಉಚಿತ ವಿದ್ಯುತ್‌

- ಇಮಾಮರು ಹಾಗೂ ಪಾದ್ರಿಗಳಿಗೆ 6 ಸಾವಿರ ರು. ಮಾಸಾಶನ

- ಉರ್ದುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ

- ಸರ್ಕಾರಿ ಆದೇಶಗಳು ಉರ್ದುವಿನಲ್ಲೂ ಇರಬೇಕು

- ಮುಸ್ಲಿಮರು, ಕ್ರೈಸ್ತರು ಹಾಗೂ ಇತರ ಅಲ್ಪಸಂಖ್ಯಾತರಿಗೆ 3 ಹಣಕಾಸು ಸಂಸ್ಥೆಗಳು

- ಮುಸ್ಲಿಮರಿಗೆ ಮನೆ ಕಟ್ಟಲು 5 ಲಕ್ಷರ ರು., ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ 20 ಲಕ್ಷ ರು.

- ಮುಸ್ಲಿಮರಿಗೆಂದೇ ಪ್ರತ್ಯೇಕ ವಿಶೇಷ ವಸತಿ ಶಾಲೆಗಳು ಹಾಗೂ ಆಸ್ಪತ್ರೆಗಳು

- ವಕ್ಫ್ ಮಂಡಳಿಗೆ ನ್ಯಾಯಾಂಗ ಅಧಿಕಾರ

- ತೆಲಂಗಾಣ ಲೋಕಸೇವಾ ಆಯೋಗಕ್ಕೆ ಓರ್ವ ಮುಸ್ಲಿಂ ಸದಸ್ಯನ ನೇಮಕ ಕಡ್ಡಾಯ

- ರೈತರ 2 ಲಕ್ಷ ರು.ವರೆಗಿನ ಸಾಲ ಮನ್ನಾ, ಶಿಕ್ಷಣಕ್ಕೆ ಬಜೆಟ್‌ನ ಶೇ.20ರಷ್ಟುಹಣ ವ್ಯಯ

- ನಿರುದ್ಯೋಗಿಗಳಿಗೆ ಮಾಸಿಕ 3000 ರು. ನಿರುದ್ಯೋಗ ಭತ್ಯೆ

- ಬಡ ಹೆಣ್ಣು ಮಕ್ಕಳ ಮದುವೆಗೆ 1.50 ಲಕ್ಷ ರು.ನೆರವು