Asianet Suvarna News Asianet Suvarna News

ಒಬ್ಬ ಟ್ಯಾಕ್ಸಿ ಚಾಲಕನ ಕಣ್ಣಲ್ಲಿ ಪ್ರಧಾನಿಯಾಗಿ ಮನಮೋಹನ್ ಮತ್ತು ಮೋದಿ ನಡುವಿನ ವ್ಯತ್ಯಾಸವೇನು?

"ನಮ್ಮ ಹಳ್ಳಿಗಳಲ್ಲಿ ಪ್ರತೀ ಕೇರಿಯಲ್ಲೂ ಜನರು ಟಿವಿ ಪರದೆ ಸುತ್ತ ಸೇರಿ ಮೋದಿ ಭಾಷಣಗಳನ್ನು ಕೇಳುತ್ತಾರೆ. ಎಲ್ಲರಿಗೂ ಮೋದಿ ಮೇಲೆ ನಂಬಿಕೆ ಇದೆ"

up voter explains the difference between modi and manmohan as pm
  • Facebook
  • Twitter
  • Whatsapp

ಲಕ್ನೋ(ಜ. 09): ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಬೆಂಬಲ ಕೊಟ್ಟ ಉತ್ತರಪ್ರದೇಶದಲ್ಲಿ ಮೋದಿ ಮೋಡಿ ಮುಂದುವರಿದಿದೆ. ಕೇಂದ್ರದ ನೋಟು ಅಮಾನ್ಯ ಕ್ರಮಕ್ಕೆ ಇಲ್ಲಿಯ ಬಹಳಷ್ಟು ಜನರು ಈಗಲೂ ಬೆಂಬಲ ವ್ಯಕ್ತಪಡಿಸುತ್ತಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಈಗಲೂ ರಾಕ್ ಸ್ಟಾರ್'ನಂತಿದ್ದಾರೆ.

ನೋಟು ಅಮಾನ್ಯ ಕ್ರಮದಿಂದ ಬಡವರಿಗೆ ಯಾವ ತೊಂದರೆಯೂ ಆಗಿಲ್ಲ. ಶ್ರೀಮಂತರು ಮಾತ್ರ ಕಸಿವಿಸಿಗೊಂಡಿದ್ದಾರೆ ಎಂದು ಊಬರ್ ಟ್ಯಾಕ್ಸಿಯ ಚಾಲಕ ರಾಘವೇಂದ್ರ ಸಿಂಗ್ ಹೇಳಿದ್ದಾರೆ. ಎನ್'ಡಿಟಿವಿ ವಾಹಿನಿಯೊಂದಿಗೆ ಮಾತನಾಡಿದ ಈ ಟ್ಯಾಕ್ಸಿ ಚಾಲಕ, ಪ್ರಧಾನಿಯಾಗಿ ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಅವರಿಬ್ಬರ ನಡುವಿನ ಪ್ರಮುಖ ವ್ಯತ್ಯಾಸವನ್ನು ಎತ್ತಿತೋರಿಸಿದ್ದಾರೆ.

"ಮನಮೋಹನ್ ಸಿಂಗ್ ಇಂಗ್ಲೀಷ್'ನಲ್ಲಿ ಭಾಷಣ ಮಾಡುತ್ತಿದ್ದರು. ಯಾರಿಗೂ ಅದು ಅರ್ಥವಾಗುತ್ತಿರಲಿಲ್ಲ. ಆಧರೆ, ಮೋದಿ ಮಾತನಾಡುವಾಗ ನಮಗೆ ಕೇಳಬೇಕೆನಿಸುತ್ತದೆ" ಎಂದು ರಾಘವೇಂದ್ರ ಸಿಂಗ್ ಹೇಳುತ್ತಾರೆ. ಮನ್ ಕೀ ಬಾತ್ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಪ್ರಧಾನಿ ಮೋದಿ ಅವರು ಹಿಂದಿಯಲ್ಲಿ ಮಾತನಾಡುವುದು ಉತ್ತರ ಭಾರತೀಯರ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತಿದೆ ಎಂಬುದಕ್ಕೆ ರಾಘವೇಂದ್ರ ಸಿಂಗ್ ಮಾತುಗಳು ಕೈಗನ್ನಡಿಯಾಗಿವೆ.

ಕೇಂದ್ರದ ನೋಟ್ ಬ್ಯಾನ್ ನಿರ್ಧಾರ ಸಂಪೂರ್ಣ ವಿಫಲ ಎಂದು ವಿಪಕ್ಷಗಳು ಜೋರಾಗಿ ಬೊಬ್ಬೆ ಹೊಡೆಯುತ್ತಿರುವುದಕ್ಕೆ ಕೂಲಾಗಿ ಪ್ರತಿಕ್ರಿಯಿಸುವ ರಾಘವೇಂದ್ರ, "ನಮ್ಮ ಹಳ್ಳಿಗಳಲ್ಲಿ ಪ್ರತೀ ಕೇರಿಯಲ್ಲೂ ಜನರು ಟಿವಿ ಪರದೆ ಸುತ್ತ ಸೇರಿ ಮೋದಿ ಭಾಷಣಗಳನ್ನು ಕೇಳುತ್ತಾರೆ. ಎಲ್ಲರಿಗೂ ಮೋದಿ ಮೇಲೆ ನಂಬಿಕೆ ಇದೆ" ಎಂದು ಹೇಳುತ್ತಾರೆ.

ನೋಟ್ ಬ್ಯಾನ್ ನಂತರ ನಗದು ಹಣ ಸರಿಯಾಗಿ ಲಭಿಸುತ್ತಿಲ್ಲ. ಬಡಬಗ್ಗರಿಗೆ ನಗದು ಹಣದ ತೀವ್ರ ಕೊರತೆ ಇದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸುವ ಅವರು, "ಬಡವರಿಗೆ ಈ ಮೊದಲೂ ಹಣವಿರಲಿಲ್ಲ. ಈಗಲೂ ಹಣವಿಲ್ಲ. ಅವರಿಗೇನೂ ವ್ಯತ್ಯಾಸವಾಗಿಲ್ಲ. ಮಧ್ಯಮ ವರ್ಗದವರು ಪೇಟಿಎಂ ಬಳಸುತ್ತಾರೆ. ಮೊಬೈಲ್ ಫೋನ್ ಮೂಲಕ ಪೇಮೆಂಟ್ ಮಾಡುತ್ತಾರೆ. ಹಳ್ಳಿಗಳಲ್ಲಿ 2 ಸಾವಿರ ರೂ.ಗಿಂತ ಹೆಚ್ಚು ಹಣ ವ್ಯಯಿಸುವುದೇ ಇಲ್ಲ. ಹೀಗಾಗಿ, ನಗದು ಹಣದ ಕೊರತೆ ಬಡವರನ್ನು ಬಾಧಿಸುವುದಿಲ್ಲ" ಎಂದು ಸ್ಪಷ್ಟಪಡಿಸುತ್ತಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಮತ ಹಾಕಿದ್ದ ರಾಘವೇಂದ್ರ ಸಿಂಗ್ ಈ ಬಾರಿ ಭಾರತೀಯ ಜನತಾ ಪಕ್ಷಕ್ಕೇ ವೋಟ್ ಒತ್ತುವ ದೃಢ ಸಂಕಲ್ಪ ತೊಟ್ಟಿದ್ದಾರಂತೆ.

(ಮಾಹಿತಿ: ಎನ್'ಡಿಟಿವಿ)

Follow Us:
Download App:
  • android
  • ios