ಲಕ್ನೋ[ಏ.15]: ಇಟಾವಾದ ಎಕ್ಸ್ ಪ್ರೆಸ್ ಹೈವೇನಲ್ಲಿ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಯೊಂದು ಉತ್ತರ ಪ್ರದೇಶದ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ದಂಪತಿ ಜೊತೆ ಅವರ ಪುಟ್ಟ ಕಂದಮ್ಮ ಕೂಡಾ ಬೈಕ್ ನಲ್ಲಿತ್ತು. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಇಲ್ಲಿದೆ ವಿವರ

ವಾಸ್ತವವಾಗಿ ಈ ದಂಪತಿಗೆ ತಾವಿದ್ದ ಬೈಕ್ ನ ಹಿಂಬಾಗದ ಟಯರ್ ಬಳಿ ಬೆಂಕಿ ತಗುಲಿರುವ ವಿಚಾರವೇ ತಿಳಿದಿರಲಿಲ್ಲ. ಆದರೆ ಈ ವಿಚಾರ ಆ ದಾರಿಯಲ್ಲಿ ಡ್ಯೂಟಿಯಲ್ಲಿದ್ದ ಉತ್ತರ ಪ್ರದೇಶ ಪೊಲೀಸ್ ಇಲಾಕೆಯ 100 ನಂಬರ್ ತಂಡದ ಗಮನಕ್ಕೆ ಬಂದಿದೆ. ಈ ದೃಶ್ಯ ಕಂಡ ಪೊಲೀಸರೇ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ಆ ಕೂಡಲೇ ಕಿರುಚಿ ಆ ದಂಪತಿಯನ್ನು ಎಚ್ಚರಿಸಲು ಯತ್ನಿಸಿದೆ ಆದರೆ ಬೈಕ್ ವೇಗವಾಗಿದ್ದ ಕಾರಣದಿಂದಲೋ ಏನೋ ಗಂಡ ಹೆಂಡತಿ ಆ ಕಡೆ ಹೆಚ್ಚು ಗಮನ ನೀಡಿಲ್ಲ. 

ಆದರೆ ಮುಂದೆ ಎದುರಾಗಲಿರುವ ಅಪಾಯವನ್ನರಿತ ಪೊಲೀಸರು ಆಕೂಡಲೇ ಅಲರ್ಟ್ ಆಗಿದ್ದಾರೆ. ವೇಗವಾಗಿ ಹೋಗುತ್ತಿದ್ದ ಬೈಕನ್ನು ಬೆನ್ನಟ್ಟಿದ್ದ ಅವರು ಸುಮಾರು 4 ಕಿ. ಮೀಟರ್ ಕ್ರಮಿಸಿದ ಬಳಿಕ ತಡೆಯಲು ಯಶಸ್ವಿಯಗಿದ್ದಾರೆ. ಕೂಡಲೇ ಬೈಕ್ ನಲ್ಲಿದ್ದವರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೊಯ್ದಿದ್ದಾರೆ. ಬಳಿಕ ಬೈಕ್ ಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಲ್ಲಿ ದಂಪತಿ ಹಾಗೂ ಮಗು ಕೂದಲೆಳೆ ಂತರದಲ್ಲಿ ಬದುಕಿದ್ದಾರೆ.

ಬೈಕ್ ಹಿಂಬಾಗದಲ್ಲಿ ಸಿಲುಕಿಸಿದ್ದ ಬ್ಯಾಗ್ ಗಳು ನೆಲಕ್ಕೆ ತಾಗಿ ಈ ಬೆಂಕಿ ತಾಗಿದೆ ಎಂದು ಅಂದಾಜಿಸಲಾಗಿದೆ. ಬೈಕ್ ಗೆ ಬೆಂಕಿ ತಗುಲುವುದು ತೀರಾ ಅಪರೂಪ ಆಗಿರುವುದರಿಂದ ಈ ಪ್ರಕರಣದ ಕುರಿತಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರ ಟ್ವಿಟರ್ ಖಾತೆಯಲ್ಲಿ ಘಟನೆಯ ವಿಡಿಯೋ ಶೇರ್ ಮಾಡಲಾಗಿದೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.