ಲಕ್ನೋ (ಮಾ.25): ಹಜ್ ಯಾತ್ರೆಗೆ ಸರ್ಕಾರವು ನೀಡುವ ಸಬ್ಸಿಡಿ ಆರ್ಥಿಕವಾಗಿ ಹಿಂದುಳಿದವರಿಗಾಗಿದೆಯೇ ಹೊರತು ಶ್ರೀಮಂತರಿಗಲ್ಲವೆಂದು ಉತ್ತರ ಪ್ರದೇಶದ ವಕ್ಫ್ ಮತ್ತು ಹಜ್ ಸಚಿವ ಮೊಹ್ಸಿನ್ ರಝಾ ಹೇಳಿದ್ದಾರೆ. ಅರ್ಹ ಮಂದಿಗೆ ಹಜ್ ಸಬ್ಸಿಡಿಯು ಸಿಗುವಂತೆ ಮಾಡುವುದು ತನ್ನ ಆದ್ಯತೆಯಾಗಿರುವುದೆಂದು ಅವರು ಹೇಳಿದ್ದಾರೆ.

ಯಾರಿಗೆ ಸ್ವಂತ ಖರ್ಚಿನಲ್ಲಿ ಹಜ್ ಯಾತ್ರೆಗೆ ಹೋಗಲು ಸಾಮರ್ಥ್ಯವಿಲ್ಲವೋ ಅಂತಹ ಅರ್ಹ ಅಭ್ಯರ್ಥಿಗಳಿಗೆ ಹಜ್ ಸಬ್ಸಿಡಿ ಸಿಗಬೇಕು. ಲಕ್ಷಾಧಿಪತಿಗಳು ಸರ್ಕಾರದ ಹಣದಿಂದ ಹಜ್ ಯಾತ್ರೆಗೆ ಹೋಗಬಾರದು. ಈ ನಿಟ್ಟಿನಲ್ಲಿ ಹಾಲಿ ನಿಯಮಗಳನ್ನು ನಾವು ಪುನರ್ ಪರಿಶೀಲಿಸುತ್ತಿದ್ದೇವೆ, ಹಾಗೂ ಹೊಸ ನಿಯಮಗಳನ್ನು ಶೀಘ್ರವೇ ಪ್ರಕಟಿಸುತ್ತೇವೆ, ಎಂದು ಅವರು ಹೇಳಿದ್ದಾರೆ.

ಹಜ್ ಯಾತ್ರಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ. ನಾವು ಎಲ್ಲಾ ಲೋಪಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.     

ಎಲ್’ಪಿಜಿ ಮಾದರಿಯಲ್ಲಿ ಹಜ್ ಸಬ್ಸಿಡಿಯನ್ನು ಬಿಟ್ಟುಬಿಡುವಂತೆ ಶ್ರೀಮಂತ ಮುಸ್ಲಿಮರಿಗೆ ಮನವಿ ಮಾಡಿರುವ ಅವರು, ಬಡವರು ಆ ಪ್ರಯೋಜನ ಪಡೆಯುವಂತಾಗಲು ಸಹಕರಿಸಲು ಕರೆ ಕೊಟ್ಟಿದ್ದಾರೆ.

ಮಾಜಿ ರಣಜಿ ಕ್ರಿಕೆಟಿಗನಾಗಿರುವ ರಝಾ ಬಿಜೆಪಿ ವಕ್ತಾರ ಕೂಡಾ ಅಗಿದ್ದು, ಉತ್ತರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಸರ್ಕಾರದಲ್ಲಿ ಐಟಿ ಹಾಗೂ ಇಲೆಕ್ಟ್ರಾನಿಕ್ಸ್ ಸಚಿವರೂ ಆಗಿದ್ದಾರೆ.