ಉತ್ತರ ಪ್ರದೇಶ ಸರ್ಕಾರ ತನ್ನ ಎಲ್ಲ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ರ ಹೆಸರಿನ ಮಧ್ಯದಲ್ಲಿ ಅವರ ತಂದೆಯ ಹೆಸರು ‘ರಾಮ್‌ಜೀ’ ಸೇರಿಸುವಂತೆ ಆದೇಶಿಸಿದೆ. ಈ ಬಗ್ಗೆ ಸುತ್ತೋಲೆ ಜಾರಿಗೊಳಿಸಿರುವ ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರದ ನಡೆ, 2019ರ ಲೋಕಸಭಾ ಚುನಾವಣೆಗೂ ಮುನ್ನಾ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಲಖನೌ: ಉತ್ತರ ಪ್ರದೇಶ ಸರ್ಕಾರ ತನ್ನ ಎಲ್ಲ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ರ ಹೆಸರಿನ ಮಧ್ಯದಲ್ಲಿ ಅವರ ತಂದೆಯ ಹೆಸರು ‘ರಾಮ್‌ಜೀ’ ಸೇರಿಸುವಂತೆ ಆದೇಶಿಸಿದೆ. ಈ ಬಗ್ಗೆ ಸುತ್ತೋಲೆ ಜಾರಿಗೊಳಿಸಿರುವ ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರದ ನಡೆ, 2019ರ ಲೋಕಸಭಾ ಚುನಾವಣೆಗೂ ಮುನ್ನಾ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಬುಧವಾರ ರಾತ್ರಿಯಿಂದಲೇ ಅನ್ವಯವಾಗುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ (ಆಡಳಿತಾತ್ಮಕ) ಜಿತೇಂದ್ರ ಕುಮಾರ್‌ ಆದೇಶ ಜಾರಿಗೊಳಿಸಿದ್ದಾರೆ.

ಅಂಬೇಡ್ಕರ್‌ರ ಹೆಸರು ಸರಿಯಾಗಿ ಬರೆಯುವ ಅಭಿಯಾನವನ್ನು 2017, ಡಿಸೆಂಬರ್‌ನಲ್ಲಿ ರಾಜ್ಯಪಾಲ ರಾಮ್‌ ನಾಯ್‌್ಕ ಆರಂಭಿಸಿದ್ದರು. ಅಂಬೇಡ್ಕರ್‌ ಸಂವಿಧಾನದಲ್ಲಿ ಸಹಿ ಮಾಡಿರುವ ರೀತಿ ಅವರ ಹೆಸರು ಬರೆಯಬೇಕು ಎಂದು ಅವರು ಪ್ರತಿಪಾದಿಸಿದ್ದರು. ಉತ್ತರ ಭಾರತದಲ್ಲಿ ಅಂಬೇಡ್ಕರ್‌ ಹೆಸರನ್ನು ‘ಭೀಮ ರಾವ್‌’ ಹೆಸರನ್ನೇ ‘ಬಿ.ಆರ್‌.’ ಎಂದು ತಪ್ಪಾಗಿ ತಿಳಿಯಲಾಗುತ್ತಿದೆ. ಆದರೆ ಬಿ.ಆರ್‌. ಎಂದರೆ ‘ಭೀಮರಾವ್‌ ರಾಮಜಿ ಅಂಬೇಡ್ಕರ್‌’. ಹೀಗಾಗಿ ಪೂರ್ತಿ ಹೆಸರು ಬರೆಯಬೇಕು ಎಂದು ಅಭಿಪ್ರಾಯಪಟ್ಟು, ಪ್ರಧಾನಿ ಮತ್ತು ಸಿಎಂಗೆ ಪತ್ರ ಬರೆದಿದ್ದರು.

ಆದೇಶ ಈಗ ರಾಜಕೀಯ ವಿವಾದವಾಗಿದ್ದು, ಲೋಕಸಭಾ ಚುನಾವಣೆಗೂ ಮುನ್ನಾ ಬಿಜೆಪಿ ರಾಜಕೀಯ ಉದ್ದೇಶದ ನಿರ್ಣಯಗಳನ್ನು ಕೈಗೊಳ್ಳುತ್ತಿದೆ ಎಂದು ಎಸ್‌ಪಿ ಆಪಾದಿಸಿದೆ. ‘ದಲಿತ ನಾಯಕನ ಹೆಸರಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಆಟ ಆಡುತ್ತಿದೆ. ರಾಮ್‌ಜೀ ಹೆಸರನ್ನು ರಾಮನ ಹೆಸರಿಗೆ ಅನ್ವರ್ಥವಾಗಿ ಬಳಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಸಮಾಜವಾದಿ ಪಕ್ಷ ದೂರಿದೆ.