ಲಕ್ನೋ[ಜ.20]: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತನ್ನ ಮಗನ ಸಾವಿಗೆ ಸಂಬಂಧಿಸಿದಂತೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದ ತಾಯಿಯೊಬ್ಬರು, ಕಂಪ್ಲೇಂಟ್ ಸ್ವೀಕರಿಸಲು ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಗೆ ಬಿದ್ದು ಗೋಗರೆದಿದ್ದಾರೆ. ಈ ಘಟನೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿದೆ.

ತನ್ನ 19 ವರ್ಷದ ಮಗ ಸಾವನ್ನಪ್ಪಿದ್ದಾನೆಂದು ಕಂಪ್ಲೇಂಟ್ ನೀಡಲು ಬಂದ ತಾಯಿಯ ದೂರು ಸ್ವೀಕರಿಸಲು ಪೊಲೀಸ್ ಅಧಿಕಾರಿ ಒಪ್ಪದಿದ್ದಾಗ, ಆ ತಾಯಿ ಇನ್ಸ್ ಪೆಕ್ಟರ್ ಎದುರು ಕೈ ಜೋಡಿಸಿ ಕೇಳಿಕೊಂಡಿದ್ದಾಳೆ. ಹೀಗಿದ್ದರೂ ಠಾಣಾಧಿಕಾರಿ ಒಪ್ಪದಿದ್ದಾಗ, ಬೇರೆ ವಿಧಿ ಇಲ್ಲದ ತಾಯಿ ಕಣ್ಣೀರು ಹಾಕುತ್ತಾ ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು ಗೋಗರೆದಿದ್ದಾಳೆ. ಈ ವೇಳೆ ರಾಜನಂತೆ ಕಾಲಿನ ಮೇಲೆ ಕಾಲು ಹಾಕಿ ತನ್ನ ಎದುರು ನಾಟಕ ನಡೆಯುತ್ತಿದೆ ಎಂಬಂತೆ ಕುಳಿತಿದ್ದ. ಆದರೆ ಅಲ್ಲಿ ಸೇರಿದ್ದ ಕೆಲ ಯುವಕರು ಠಾಣಾಧಿಕಾರಿಯ ಈ ಹಂಕಾರಭರಿತ ವರ್ತನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ, ವಿಡಿಯೋ ವೈರಲ್ ಮಾಡಿದ್ದಾರೆ. ಇದರಿಂದ ಭಯಗೊಂಡ ಪೊಲೀಸ್ ಅಧಿಕಾರಿ ದೂರು ಸ್ವೀಕರಿಸಿ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ದರ್ಪ ಮೆರೆದ ಪೊಲಿಸ್ ಅಧಿಕಾರಿಯನ್ನು ಹಿರಿಯ ಅಧಿಕಾರಿಗಳು ಅಮಾನತ್ತುಗೊಳಿಸಿದ್ದಾರೆ.

ವಾಸ್ತವವಾಗಿ ಲಕ್ನೋದ ಗೋಂಡ್ವಾ ಇಲಾಖೆಯಲ್ಲಿರುವ ಒಂದು ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಟಿಂಕೂ ಮೈ ಮೇಲೆ ಮಷೀನ್ ಬಿದ್ದು ಸಾವನ್ನಪ್ಪಿದ್ದ ಟಿಂಕೂನ ಸಹೋದರ ಕೂಡಾ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಫ್ಯಾಕ್ಟರಿಯ ಮಾಲಿಕ ಫ್ಯಾಕ್ಟರಿಗೆ ಸಂಬಂಧಿಸಿದಂತೆ ಯಾವುದೇ ಪರವಾನಿಗೆ ಪತ್ರ ಹೊಂದಿಲ್ಲ, ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾಗಿದೆ.ಹೀಗಾಗಿ ಟಿಂಕೂನ ತಾಯಿ ಫ್ಯಾಕ್ಟರಿ ಮಾಲಿಕ ವಿರುದ್ಧ ಕ್ರಮ ಕೈಗೊಂಡು ತನ್ನ ಮಗನಿಗೆ ನ್ಯಾಯ ದೊರಕಿಸುವಂತೆ ಕೇಳಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರೆನ್ನಲಾಗಿದೆ. 

ಆದರೆ ತಾಯಿಯ ಗೋಗರೆತ ಹಾಗೂ ಪೊಲೀಸ್ ಅಧಿಕಾರಿ ದರ್ಪ ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ದೂರನ್ನು ಸ್ವೀಕರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ ಪಿ ಹರೇಂದ್ರ ಸಿಂಗ್ 'ನಾನೂ ಈ ಘಟನೆಯ ವಿಡಿಯೋ ವೀಕ್ಷಿಸಿದ್ದೇನೆ. ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸದ್ಯ ದರ್ಪ ಮೆರೆದ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ' ಎಂದಿದ್ದಾರೆ.