ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಘೋರ ದುರಂತವೇ ನಡೆದು ಹೋಗಿದೆ. ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ 30 ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಉತ್ತರಪ್ರದೇಶ(ಆ.12):ಆಕ್ಸಿಜನ್ ಕೊರತೆಯಿಂದ 48 ಗಂಟೆಗಳಲ್ಲಿ ಸುಮಾರು 30 ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಿಎಂ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಗೋರಖ್'ಪುರ್ನಲ್ಲಿರುವ ಅತಿದೊಡ್ಡ ಆಸ್ಪತ್ರೆ ಬಾಬಾ ರಾಘವದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಿಆರ್ಡಿ ಆಸ್ಪತ್ರೆಗೆ ಖಾಸಗಿ ಕಂಪನಿಯೊಂದು ಗುತ್ತಿಗೆ ಆಧಾರದ ಮೇಲೆ ಆಕ್ಸಿಜನ್ ಸಿಲಿಂಡರ್ನ್ನು ಒದಗಿಸುತ್ತಿತ್ತು. ಈ ಮಧ್ಯೆ ಸುಮಾರು 60 ಲಕ್ಷ ರೂ.ಬಾಕಿ ಮೊತ್ತವನ್ನು ಪಾವತಿಸದೇ ಇದ್ದಿದ್ದಕ್ಕೆ ಆಕ್ಸಿಜನ್ ಪೂರೈಕೆಯಾಗದೇ ಮಕ್ಕಳು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ.
ಆದರೆ ಆಕ್ಸಿಜನ್ ಕೊರತೆಯಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಆರೋಪವನ್ನು ಆರೋಗ್ಯ ಇಲಾಖೆ ತಳ್ಳಿ ಹಾಕಿದೆ. 30 ಮಕ್ಕಳು ಸಾವು ಆಮ್ಲಜನಕ ಕೊರತೆಯಿಂದ ಆಗಿಲ್ಲ. ಮೆದುಳು ಸಂಬಂಧಿ ರೋಗದಿಂದ ಆಗಿದೆ ಎಂಬ ವರದಿ ನೀಡಿದೆ. ಅಲ್ದೇ ಯುಪಿಯಲ್ಲಿ ಒಂದೇ ವರ್ಷದಲ್ಲಿ ಮೆದುಳು ರೋಗಕ್ಕೆ 114 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.
ಇನ್ನು ಘಟನೆಯ ಬಗ್ಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್, ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ರ ರಾಜೀನಾಮೆಗೆ ಆಗ್ರಹಿಸಿವೆ. ಅಲ್ದೇ ಸಾವನ್ನಪ್ಪಿದ್ದ ಮಕ್ಕಳ ಕುಟುಂಬಗಳಿಗೆ 20 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿವೆ.
ಒಟ್ನಲ್ಲಿ ಎರಡೇ ದಿನದಲ್ಲಿ 30 ಮಕ್ಕಳು ಸಾವಪ್ಪಿರೋದು ದುರಾದೃಷ್ಟಕರ ಸಿಎಂ ಆದಿತ್ಯನಾಥ್ ಸರ್ಕಾರ ಘಟನೆಯ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕಿದೆ.
