ವಿಶ್ವಸಂಸ್ಥೆ(ಆ.15): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಸರ್ಕಾರದ ನಿರ್ಣಯ ಹಾಗೂ ಅದರ ಪರಿಣಾಮಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಹಸ್ಯ ಸಭೆ ನಡೆಸಲಿದೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಕುರಿತು ಇದೇ ಶುಕ್ರವಾರ(ಆ.16)ರಂದು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಲಾಗುವುದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಜೋನ್ನಾ ವ್ರೋನೆಕ್ಕಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತು ಸಭೆ ಕರೆಯುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಕೊಹ್ಮದ್ ಖುರೇಶಿ ಹೇಳಿದ್ದರು.

ಅದರಂತೆ ಈ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಹಸ್ಯ ಸಭೆ ನಡೆಸಲು ಮುಂದಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ವೇಳೇ ಪಾಕಿಸ್ತಾನದ ಮನವಿ ಪುರಸ್ಕರಿಸಿ ಸಭೆ ನಡೆಸುವಂತೆ ಚೀನಾ ಕೂಡ ಆಗ್ರಹಿಸಿತ್ತು. ಅಲ್ಲದೇ ವಿಶ್ವಸಂಸ್ಥೆ ಮುಖ್ಯಸ್ಥರಿಗೆ ಚೀನಾ ಪತ್ರ ಕೂಡ ಬರೆದಿತ್ತು.