ನವದೆಹಲಿ(ಆ.17): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಣ ಪ್ರಶ್ನಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೊರೆ ಹೋಗಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

ಪಾಕಿಸ್ತಾನದ ಆಗ್ರಹವನ್ನು ಭದ್ರತಾ ಮಂಡಳಿ ಸಭೆ ಇದು ಭಾರತದ ಆಂತರಿಕ ವಿಷಯ ಎಂದು ಹೇಳಿ ತಳ್ಳಿ ಹಾಕಿದೆ. ಇದರಿಂದ ಪಾಕಿಸ್ತಾನ ಜಾಗತಿಕವಾಗಿ ಏಕಾಂಗಿಯಾಗಿದ್ದು, ಭಾರತಕ್ಕೆ ಮತ್ತೊಂದು ಜಯ ಸಿಕ್ಕಂತಾಗಿದೆ.

ಆದರೆ ಈ ಜಯ ಅದೇಕೊ ಕಾಂಗ್ರೆಸ್’ಗೆ ಪಥ್ಯವಾದಂತಿಲ್ಲ. ಆರ್ಟಿಕಲ್ 370ರ ವಿಷಯ ಭದ್ರತಾ ಮಂಡಳಿವರೆಗೂ ಹೋಗಲು ಮೋದಿ ಸರ್ಕಾರ ಅನುವು ಮಾಡಿಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್’ನ ಅಭಿಷೇಕ್ ಮನು ಸಿಂಘ್ವಿ, ಭಾರತದ ಆಂತರಿಕ ವಿಷಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚರ್ಚೆಯಾಗಿದ್ದು ವಿಷಾದನೀಯ ಎಂದು ಹೇಳಿದ್ದಾರೆ.

ಭಾರತದ ಆಂತರಿಕ ವಿಷಯವನ್ನು ವಿಶ್ವ ವೇದಿಕೆಯಲ್ಲಿ ಚರ್ಚೆಯಾಗಲು ಬಿಟ್ಟ ಮೋದಿ ಸರ್ಕಾರ, ದೇಶದ ಮಾನ ಹರಾಜು ಹಾಕಿದೆ ಎಂದು ಸಿಂಘ್ವಿ ಕಿಡಿಕಾರಿದ್ದಾರೆ.