Asianet Suvarna News Asianet Suvarna News

ಜಾಗತಿಕ ಉಗ್ರರ ಪಟ್ಟಿಗೆ ಅಜರ್‌?

ಜಾಗತಿಕ ಉಗ್ರರ ಪಟ್ಟಿಗೆ ಇಂದು ಅಜರ್‌? | ವಿಶ್ವಸಂಸ್ಥೆಯ ದಿಗ್ಬಂಧನ ಸಮಿತಿ ಸಭೆ | ಚೀನಾದಿಂದ ತಡೆ ತೆರವು ಸಾಧ್ಯತೆ

UNO may announce Jaish chief Masood Azhar as global terrorist
Author
Bengaluru, First Published May 1, 2019, 8:35 AM IST
  • Facebook
  • Twitter
  • Whatsapp

ನವದೆಹಲಿ (ಮೇ. 01): ಪುಲ್ವಾಮಾ ಸೇರಿದಂತೆ ದೇಶದಲ್ಲಿ ಹಲವು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿರುವ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯು ಬುಧವಾರ ಜಾಗತಿಕ ಉಗ್ರಗಾಮಿಗಳ ಪಟ್ಟಿಗೆ ಸೇರ್ಪಡೆ ಮಾಡುವ ಸಾಧ್ಯತೆಗಳು ಕಂಡುಬರುತ್ತಿವೆ.

ವಿಶ್ವಸಂಸ್ಥೆಯ ದಿಗ್ಬಂಧನ ಸಮಿತಿಯ ಸಭೆ ಬುಧವಾರ ನಡೆಯಲಿದೆ. ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಗಳಿಗೆ ಈವರೆಗೆ 4 ಬಾರಿ ತಡೆಯೊಡ್ಡಿರುವ ಚೀನಾ, ಈ ಬಾರಿ ತನ್ನ ನಿಲುವು ಬದಲಿಸಿಕೊಳ್ಳುವುದು ಪಕ್ಕಾ ಆಗಿದೆ. ಹೀಗಾಗಿ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಬುಧವಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಈ ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ವ್ಯಕ್ತಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಂದು ವೇಳೆ, ಅಜರ್‌ ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಯಾಗಿದ್ದೇ ಆದಲ್ಲಿ ಅದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಜಯವಾಗಲಿದೆ. ಅಜರ್‌ನ ಆರ್ಥಿಕ ವ್ಯವಹಾರ, ಓಡಾಟಗಳಿಗೂ ಈ ನಿರ್ಧಾರದಿಂದ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಭಾರತ ಒತ್ತಾಯಿಸುತ್ತಲೇ ಬಂದಿತ್ತು. ಅದಕ್ಕೆ ಪಾಕಿಸ್ತಾನದ ಆಪ್ತ ಮಿತ್ರ ಚೀನಾ ವಿಶ್ವಸಂಸ್ಥೆಯಲ್ಲಿ ತನಗಿರುವ ಅಧಿಕಾರ ಬಳಸಿ ತಡೆಯೊಡ್ಡುತ್ತಲೇ ಬಂದಿತ್ತು. 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕ ಹಾಗೂ ಬ್ರಿಟನ್‌ ಬೆಂಬಲದೊಂದಿಗೆ ಫ್ರಾನ್ಸ್‌ ಮಂಡಿಸಿತ್ತು. ಇದಕ್ಕೂ ಚೀನಾ ತಡೆಯೊಡ್ಡಿತ್ತು. ಆದರೆ ಅಮೆರಿಕ ಮತ್ತಿತರ ದೇಶಗಳ ಒತ್ತಡಕ್ಕೆ ಮಣಿದು ಈಗ ತಡೆ ತೆರವುಗೊಳಿಸುವ ನಿಲುವಿಗೆ ಬಂದಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios