ನವದೆಹಲಿ(ಆ.02): ಮಹತ್ವದ ಬೆಳವಣಿಗೆಯೊಂದರಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019ಕ್ಕೆ(ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ.

ರಾಜ್ಯಸಭೆ ಕಲಾಪ ಆರಂಭಗೊಂಡ ಬಳಿಕ ತಿದ್ದುಪಡಿ ಮಸೂದೆ ಕುರಿತು ಪರ-ವಿರೋಧ ಚರ್ಚೆ ನಡೆಯಿತು. ಬಳಿಕ ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆ ಪರ 147 ಮತಗಳು ಹಾಗೂ ವಿರುದ್ಧವಾಗಿ ಕೇವಲ 42 ಮತಗಳು ಮಾತ್ರ ಬಿದ್ದವು. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಸಂಸತ್ತಿನ ಮೇಲ್ಮನೆ ಅಂಗೀಕರಿಸಿತು.

ಮಸೂದೆ ಪರಿಶೀಲನೆಗೆ ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ವಿರೋಧ ಪಕ್ಷಗಳು ನಿಲುವಳಿ ಮಂಡಿಸಿದವು. ಇದಕ್ಕೆ ಸದನದಲ್ಲಿ 104 ಮತಗಳು ವಿರುದ್ಧವಾಗಿ ಹಾಗೂ 85 ಮತಗಳು ಪರವಾಗಿ ಬಿದ್ದ ಪರಿಣಾಮ ಆಯ್ಕೆ ಸಮಿತಿಗೆ ಹೋಗದೆ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು. 

ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಎಪಿಎ ಮಸೂದೆ ಇರುವುದು ದೇಶದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುವುದಕ್ಕೆ ಹೊರತು ಬೇರೆ ಯಾವ ಉದ್ದೇಶಕ್ಕೂ ಅಲ್ಲ ಎಂದು ಸ್ಪಷ್ಟಪಡಿಸಿದರು. 

ತಿದ್ದುಪಡಿ ವಿಧೇಯಕದಲ್ಲಿ ನಾಲ್ಕು ಹಂತಗಳ ಪರಿಶೀಲನೆ ಮಾಡಲಾಗಿದ್ದು, ಇಲ್ಲಿ ಯಾವುದೇ ರೀತಿಯಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಅಮಿತ್ ಶಾ ಸದನಕ್ಕೆ ಭರವಸೆ ನೀಡಿದರು.

ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಲು ಸರ್ಕಾರಕ್ಕೆ ಬಲವನ್ನು ನೀಡುವ ಮಸೂದೆ ಇದಾಗಿದ್ದು, ಭಯೋತ್ಪಾದನೆಗೆ ಸಂಬಂಧಪಟ್ಟ ಪ್ರಕರಣಗಳ ತ್ವರಿತ ವಿಚಾರಣೆಗೆ ಈ ಕಾಯ್ದೆ ಸಹಕರಿಸಲಿದೆ ಎಂದು ಗೃಹ ಸಚಿವರು ಸದನಕ್ಕೆ ಮನದಟ್ಟು ಮಾಡಿಕೊಟ್ಟರು.  

ವ್ಯಕ್ತಿಯೊಬ್ಬನನ್ನು ಭಯೋತ್ಪಾದಕ ಎಂದು ಹೇಗೆ ಪರಿಗಣಿಸುವುದು ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ನಮೂದಿಸಿಲ್ಲ. ಹೀಗಾಗಿ ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿರೋಧ ಮಸೂದೆಯನ್ನು ತೀವ್ರವಾಗಿ  ವಿರೋಧಿಸಿದವು. ಆದರೆ ಅಂತಿಮವಾಗಿ ಮತದಾನದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.