ಬೆಂಗಳೂರು[ಮಾ.20]: ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ವರದಿ ಅನ್ವಯ ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು, ಬಿ.ಇಡಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕರ ವೇತನ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲ ಹಂತಗಳ ಪ್ರಾಧ್ಯಾಪಕರ ಮೂಲವೇತನವನ್ನು ಪರಿಷ್ಕರಣೆ ಮಾಡಲಾಗಿದ್ದು, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಕೂಡ 2016ರ ಜನವರಿ 1ರಿಂದ ಪೂರ್ವಾನ್ವಯವಾಗಲಿವೆ ಎಂದು ತಿಳಿಸಿದೆ.

ಸಹಾಯಕ ಪ್ರಾಧ್ಯಾಪಕರ ವೇತನ ಶ್ರೇಣಿಯು 57,700 ರು.ಗಳಿಂದ 1,82,400 ರು., ಹಿರಿಯ ಸಹಾಯಕ ಪ್ರಾಧ್ಯಾಪಕರ ವೇತನ ಶ್ರೇಣಿಯು 68,900 ರು.ಗಳಿಂದ 2,05,000 ರು., ಆಯ್ಕೆ ಶ್ರೇಣಿಯ ಸಹಾಯಕ ಪ್ರಾಧ್ಯಾಪಕರ ವೇತನ ಶ್ರೇಣಿಯು 79,800 ರು.ಗಳಿಂದ 2,11,500 ರು.ಗಳಿಗೆ ನಿಗದಿಯಾಗಿದೆ.

ಸಹ ಪ್ರಾಧ್ಯಾಪಕರ ವೇತನ ಶ್ರೇಣಿಯು 1,31,400 ರು.ಗಳಿಂದ 2,17,100 ರು., ಪ್ರಾಧ್ಯಾಪಕರ ವೇತನ ಶ್ರೇಣಿಯು 1,44,200 ರು.ಗಳಿಂದ 2,18,200 ರು. ಹಾಗೂ ಹಿರಿಯ ಪ್ರಾಧ್ಯಾಪಕರ ವೇತನ ಶ್ರೇಣಿಯು 1,82,200 ರು.ಗಳಿಂದ 2,24,100 ರು. ವರೆಗೆ ನಿಗದಿ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಅಧೀನ ಕಾರ್ಯದರ್ಶಿ ಎನ್‌. ವೀರಬ್ರಹ್ಮಚಾರಿ ಆದೇಶದಲ್ಲಿ ತಿಳಿಸಿದ್ದಾರೆ.