ವಾಷಿಂಗ್ಟನ್(ಜು.11): ಗ್ರೀನ್ ಕಾರ್ಡ್‌ ನೀಡುವಲ್ಲಿ ಪ್ರಸ್ತುತ ಇರುವ ಗರಿಷ್ಟ ಮಿತಿಯನ್ನು ತೆಗೆದು ಹಾಕುವ ಮಹತ್ವದ ಮಸೂದೆಯನ್ನು ಅಮೆರಿಕ ಸೆನೆಟ್ ಅಂಗೀಕರಿಸಿದೆ. ಇದರಿಂದ ಸಾವಿರಕ್ಕೂ ಹೆಚ್ಚು ನುರಿತ  ಭಾರತೀಯ ಐಟಿ ವೃತ್ತಿಪರರಿಗೆ ಪ್ರಯೋಜನವಾಗಲಿದೆ.

ಫೈರ್ಮೆಸ್ ಆಫ್  ಹೈ-ಸ್ಕಿಲ್ಡ್ ಇಮಿಗ್ರಾಟ್ಸ್ ಕಾಯ್ದೆ 2019 ಅಥವಾ ಎಚ್‌ಆರ್ 1044 ಮಸೂದೆಯನ್ನು 365-65 ಮತಗಳ ಬಹುಮತದಿಂದ ಸದನ ಅಂಗೀಕರಿಸಿದೆ. ಈ ಮಸೂದೆಯಿಂದಾಗಿ ಗ್ರೀನ್ ಕಾರ್ಡ್ ಹೊಂದಿದ ವ್ಯಕ್ತಿ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಾಗೂ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾನೆ.

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದ ಈ ಮಸೂದೆ, ಕಾನೂನಾಗಿ ಮಾನ್ಯತೆ ಪಡೆದ ಬಳಿಕ ಅಮೆರಿಕದಲ್ಲಿ ಶಾಶ್ವತ ಕೆಲಸ ಮತ್ತು  ವಾಸದ ಪರವಾನಗಿ ಬಯಸುವ ಭಾರತ ಮತ್ತು ಇತರ ದೇಶಗಳ ಪ್ರತಿಭಾವಂತ ವೃತ್ತಿಪರರಿಗೆ ಅನುಕೂಲವಾಗಲಿದೆ.

ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಒಂದು ನಿರ್ದಿಷ್ಟ ವರ್ಷದಲ್ಲಿ ಅಮೆರಿಕ ನೀಡಬೇಕಾದ ಕುಟುಂಬ ಆಧಾರಿತ  ವಲಸೆಗಾರರ ​​ವೀಸಾಗಳ ಪೈಕಿ, ಒಂದು ದೇಶದ ಜನರಿಗೆ ಗರಿಷ್ಠ ಶೇ.7ರಷ್ಟು ನೀಡಬಹುದಾಗಿದೆ. ಆದರೆ ಹೊಸ ಮಸೂದೆಯ ಪ್ರಕಾರ ಈ ಮಿತಿಯನ್ನು ಶೇ.15ಕ್ಕೆ ಹೆಚ್ಚಿಸಲು ಅವಕಾಶವಿದೆ.