ಸೂರತ್‌[ಮಾ.03]: ಸಮಯಕ್ಕೆ ತಕ್ಕಂತೆ ಹೊಸ ಮಾದರಿಯ ಬಟ್ಟೆಗಳನ್ನು ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವ, ದೇಶದ ಸೀರೆ ಫ್ಯಾಕ್ಟರಿ ಖ್ಯಾತಿಯ ಸೂರತ್‌ನ ಉದ್ಯಮಿಗಳು, ಇದೀಗ ವಾಯುಪಡೆಯ ಯೋಧ ಅಭಿನಂದನ್‌ ಅವರ ಇತ್ತೀಚಿನ ಸಾಹಸವನ್ನು ವರ್ಣಿಸುವ ಸೀರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಸೂರತ್‌ನ ಅನ್ನಪೂರ್ಣ ಡೈಯಿಂಗ್‌ ಮಿಲ್‌ ಈ ಹೊಸ ಮಾದರಿಯ ಪ್ರಿಂಟೆಡ್‌ ಸೀರೆಯ ಗೌರವವನ್ನು ‘ಅಭಿನಂದನ್‌’ ಹೆಸರಿಗೆ ನೀಡಿದೆ. ತಿಳಿ ನೀಲಿ ಕೋಟ್‌ (ವಾಯುಸೇನಾ ಬ್ಲೆಸರ್‌) ತಿಳಿ ಕಂದು ಬಣ್ಣದ ಪ್ಯಾಂಟ್‌ ಮಾದರಿಯ ಪ್ರಿಂಟೆಡ್‌ ಸೀರೆ ಇದೀಗ ಮಾರುಕಟ್ಟೆಗೆ ಕಾಲಿಟ್ಟಿದ್ದು, ಅಭಿನಂದನ್‌ ನಡೆಸಿದ ದಾಳಿ, ಮರಳಿ ದೇಶಕ್ಕೆ ಆಗಮಿಸಿದ ಹಲವು ದೃಶ್ಯಾವಳಿಗಳನ್ನು ಈ ಸೀರೆಯಲ್ಲಿ ಮುದ್ರಿಸಲಾಗಿದೆ.

ಇದು ಹೆಂಗಳೆಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೇ ಪುಲ್ವಾನಾ ಘಟನೆ ನಂತರ ಸೇನಾ ಧಿರಿಸಿನ ಮಾದರಿಯ ಪ್ರಿಂಟೆಡ್‌ ಸೀರೆಯನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಲಾಭವನ್ನು ಪುಲ್ವಾಮಾ ಘಟನೆಯಲ್ಲಿ ಮೃತ ಯೋಧರ ಕುಟುಂಬಕ್ಕೆ ನೀಡಿ ಗೌರವ ಸಲ್ಲಿಸಿತ್ತು. ಇದೀಗ ‘ಅಭಿನಂದನ್‌’ ಸೀರೆ ನಾರಿಯರ ಮನಸನ್ನು ಕದಿಯುತ್ತಿದೆ.