ಬೆಂಗಳೂರು : ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ರಾಜ್ಯದ ಅಗತ್ಯಗಳ ಕುರಿತು ಚರ್ಚಿಸಲು ರಾಜ್ಯವನ್ನು ಪ್ರತಿನಿಧಿಸಿರುವ 4 ಕೇಂದ್ರ ಸಚಿವರು 15 ದಿನ ಕ್ಕೊಮ್ಮೆ ಸಭೆ ನಡೆಸುತ್ತೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಸ ಗೊಬ್ಬರ ಹಾಗೂ ರಾಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ಭರವಸೆ ಇತ್ತಿದ್ದಾರೆ. 

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೆಹಲಿಯಿಂದ ಶನಿವಾರ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ, ರಾಜ್ಯದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದ್ದೇವೆ. ತಾವೂ ಸೇರಿ ನಿರ್ಮಲಾ ಸೀತಾ ರಾಮನ್, ಡಿ.ವಿ. ಸದಾನಂದಗೌಡ ಮತ್ತು ಸುರೇಶ್ ಅಂಗಡಿ ರಾಜ್ಯದ ಹಿತ ಕಾಪಾಡಲು ಕಾರ್ಯ ನಿರ್ವಹಿಸುತ್ತೇವೆ. ರಾಜ್ಯದ ಸಮಸ್ಯೆ, ಅಗತ್ಯಗಳ ಬಗ್ಗೆ ಚರ್ಚಿಸಲು ನಾಲ್ವರಲ್ಲಿ ಯಾರದ್ದಾದರೂ ಒಬ್ಬರ ಮನೆಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರುತ್ತೇವೆ ಎಂದರು. 

ಇದೇ ವೇಳೆ, ನಗರದಲ್ಲಿ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಸದಾನಂದಗೌಡ, ಈಗ ಅನಂತ ಕುಮಾರ್ ನಮ್ಮ ಜತೆ ಇಲ್ಲ. ರಾಜ್ಯದ ಪ್ರತಿನಿಧಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಲಭ್ಯವಾ ಗಿದ್ದು, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದ ಅಭಿವೃದ್ಧಿಗಾಗಿ ನಾಲ್ವರು ಸಚಿವರು ಒಟ್ಟಾಗಿ ಹೋಗುತ್ತೇವೆ. ಈಗಾಗಲೇ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಾತನಾಡಿದ್ದು, ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರಿ ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು.