ಬೆಂಗಳೂರು :  ಉಗ್ರರ ದಾಳಿಯಿಂದ ನಮ್ಮ ಸೈನಿಕರ ಆತ್ಮ ಸ್ಥೈರ್ಯ ಕುಗ್ಗಿಲ್ಲ. ಉಗ್ರರ ಕೃತ್ಯದ ವಿರುದ್ಧ ದೇಶದ ಜನರು ತೋರಿಸಿರುವ ಬೆಂಬಲದಿಂದಾಗಿ ಭಯೋತ್ಪಾದನೆ ವಿರುದ್ಧ ಎಲ್ಲರೂ ಜತೆಯಾಗಿ ಹೋರಾಟ ಮಾಡುತ್ತೇವೆ ಎಂಬ ಮನೋಸ್ಥೈರ್ಯ ಸೈನಿಕರಲ್ಲಿ ಬಂದಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ತುಕಡಿಯ ಮೇಲೆ ಉಗ್ರರ ದಾಳಿಯಿಂದ ಭಾರತದ ಸೈನಿಕರ ನೈತಿಕ ಬಲ ಕಡಿಮೆ ಆಗಿಲ್ಲ. ಬದಲಾಗಿ ಉಗ್ರರ ದಾಳಿ ಖಂಡಿಸಿ ರಾಷ್ಟ್ರದ ಜನರು ತೋರಿರುವ ಬೆಂಬಲ ನೋಡಿ ಮುಂದಿನ ದಿನದಲ್ಲಿ ಉಗ್ರವಾದದ ವಿರುದ್ಧ ಹೋರಾಡಲಿದ್ದಾರೆ. ರಕ್ಷಣಾ ಇಲಾಖೆ ಹಾಗೂ ದೇಶದ ಜನರು ನೈತಿಕ ಬೆಂಬಲ ನೀಡಿರುವುದರಿಂದ ಯೋಧರು ತಮ್ಮ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕ್‌ಗೆ ತಿರುಗೇಟು:  ಉಗ್ರರ ದಾಳಿ ಹಾಗೂ ಪಾಕಿಸ್ತಾನದ ಗಡಿ ಪುಂಡಾಟಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಪುಲ್ವಾಮಾ ದಾಳಿ ಕುರಿತು ಸಾಕ್ಷ್ಯಾಧಾರ ಒದಗಿಸುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ, ಆದರೆ ದೇಶದಲ್ಲಿ ಮುಂಬಯಿ ದಾಳಿಯಿಂದ ಇಲ್ಲಿಯವರೆಗೆ ಉಗ್ರರ ದಾಳಿ ನಡೆದಿರುವ ಬಗ್ಗೆ ಅನೇಕ ಬಾರಿ ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನಕ್ಕೆ ನೀಡಿದರೂ, ಉಗ್ರರ ವಿರುದ್ಧ ಪಾಕ್‌ ಏನು ಕ್ರಮ ಕೈಗೊಂಡಿದೆ ಎಂಬುದು ಪ್ರಪಂಚಕ್ಕೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

ವಿಮಾನ ದುರಂತ ವರದಿ ಬಂದ ನಂತರ ಪ್ರತಿಕ್ರಿಯೆ:

ಪುಲ್ವಾಮಾ ದಾಳಿ ಬಗ್ಗೆ ಸಿಆರ್‌ಪಿಎಫ್‌, ಭದ್ರತಾ ತಂಡಗಳು ವರದಿ ನೀಡುವ ತನಕ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸೂರ್ಯಕಿರಣ್‌ ಮತ್ತು ಮಿರಾಜ್‌ 2000 ಅವಗಢ ಘಟನೆ ಕುರಿತು ತನಿಖಾ ವರದಿ ಬರದೆ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ ಎಂದರು.