ರಾಜೀನಾಮೆ ಊಹಾಪೋಹ ಎಂದ ಎಂ.ಜೆ. ಅಕ್ಬರ್! ತಮ್ಮ ವಿರುದ್ದದ ಆರೋಪ ನಿರಾಕರಿಸಿದ ಕೇಂದ್ರ ಸಚಿವ! ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅಕ್ಬರ್! ಲೈಂಗಿಕ ಕಿರುಕುಳ ಆರೋಪ ನಿರಾಧಾರ ಎಂದ ಅಕ್ಬರ್
ನವದೆಹಲಿ(ಅ.14): : #ಮೀ ಟೂ ಅಭಿಯಾನದಲ್ಲಿ ತಮ್ಮ ವಿರುದ್ಧ ಮಾಡಿರುವ ಲೈಂಗಿಕ ಆರೋಪ ನಿರಾಧಾರವಾಗಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಎಂ. ಜೆ. ಅಕ್ಬರ್ ಹೇಳಿದ್ದಾರೆ.
ಯಾವುದೇ ಆಧಾರ ಇಲ್ಲದೆ ತಮ್ಮ ವಿರುದ್ಧ ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಗಿದೆ. ಈ ನಿರಾಧಾರ ಆರೋಪ ಕುರಿತು ಮುಂದೆ ಕೈಗೊಳ್ಳಬೇಕಾದ ಕ್ರಮ ಕುರಿತು ವಕೀಲರು ನೋಡಿಕೊಳ್ಳಲಿದ್ದಾರೆ ಎಂದು ಅಕ್ಬರ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಇರುವಂತೆಯೇ ಈ ವಿವಾದ ಉದ್ಬವಿಸಿರುವುದು ಏಕೆ ಎಂದು ಅಕ್ಬರ್ ಪ್ರಶ್ನಿಸಿದ್ದು, ತಮ್ಮ ವರ್ಚಸ್ಸು ಹಾಳು ಮಾಡುವ ಸಂಚು ಈ ಆರೋಪದ ಹಿಂದಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವನ್ನು ತಳ್ಳಿ ಹಾಕಿದ ಅಕ್ಬರ್, ತಪ್ಪು ಮಾಡದೇ ಇದ್ದ ಮೇಲೆ ಏತಕ್ಕಾಗಿ ರಾಜೀನಾಮೆ ನೀಡಲಿ ಎಂದು ಪ್ರಶ್ನಸಿದ್ದಾರೆ.
ರಾಜಕೀಯ ಪ್ರವೇಶಕ್ಕೂ ಮುನ್ನ ಅಕ್ಬರ್ ಹಲವು ಪತ್ರಿಕೆಗಳಲ್ಲಿ ಸಂಪಾದಕರಾಗಿದ್ದ ವೇಳೆಯಲ್ಲಿ, ಅನೇಕ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕೆಂಬ ಒತ್ತಡವೂ ಹೆಚ್ಚಾಗಿತ್ತು.
