ಈಗಾಗಲೇ ಪ್ರವಾಹಕ್ಕೆ ವಿದೇಶಿ ನೆರವು ಪಡೆಯಲು ಕೇಂದ್ರ ಸರ್ಕಾರ ನಿರಾಕರಿಸಿದ್ದು ಈ ಸಂಬಂಧ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. 

ಕಲಬುರಗಿ :  ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ವಿದೇಶಿ ನೆರವು ಪಡೆಯುವ ಬಗ್ಗೆ ಸ್ಪಷ್ಟ ನೀತಿ ರೂಪಿಸಲಿ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಸರ್ವಪಕ್ಷಗಳ ಸಭೆ ಕರೆದು ಕೇಂದ್ರ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು ಎಂದು ಅವರು ಹೇಳಿದ್ದಾರೆ. 

ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ವಿದೇಶಿ ನೆರವು ಪಡೆದಿಲ್ಲ ಅಂದರೆ ಅದು ರಾಷ್ಟ್ರೀಯ ನೀತಿ ಅಲ್ಲ. ಈಗಿನ ಪರಿಸ್ಥಿತಿಯನ್ನು ನೋಡಿಕೊಂಡು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದರಿಂದ ವಿದೇಶಿ ನೀತಿಗೆ ಧಕ್ಕೆ ಆಗುತ್ತದೆ ಎನ್ನುವುದನ್ನು ಪರಿಶೀಲಿಸಿ ಸೂಕ್ತ ನಿರ್ಣಯ ಕೈಗೊಳ್ಳಲಿ. 

ಕೇರಳ ಸರ್ಕಾರ ಎರಡು ಸಾವಿರ ಕೋಟಿ ರೂಪಾಯಿ ನೆರವು ಕೇಳಿದೆ. ಅದನ್ನ ಕೇಂದ್ರ ಸರ್ಕಾರವೇ ನೀಡಿದರೆ ವಿದೇಶಗಳಿಂದ ನೆರವು ಪಡೆಯುವ ಅವಶ್ಯಕತೆ ಇಲ್ಲ. ನೆರೆ ಹಾನಿ ಸಮೀಕ್ಷೆ ನಂತರ ನಡೆಯಲಿ ಮೊದಲು ತಾತ್ಕಾಲಿಕವಾಗಿಯಾದರೂ ಹಣ ಬಿಡುಗಡೆಯಾಗಲಿ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. 

ಕೇಂದ್ರ ಸರಕಾರ ಕೂಡಲೇ ಮುಂಗಡವಾಗಿ ಹಣ ನೀಡಬೇಕು ಅದಾದ ಬಳಿಕ ಲೆಕ್ಕ ಪತ್ರ ಕೇಳಬೇಕು. ಯಾವುದೇ ತಾರತಮ್ಯ ಮಾಡದೆ ಕೇರಳ ಮತ್ತು ಕೊಡಗಿಗೆ ಕೇಂದ್ರ ಸರ್ಕಾರ ಕೂಡಲೆ ನೆರವು ನೀಡಲಿ ಎಂದು ಕಲಬುರ್ಗಿಯಲ್ಲಿ ಕಾಂಗ್ರೆಸ್ ಸಂಸದಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.