ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಕೊಡಲು ಹೊಸ ಬ್ಯಾಂಕ್

Union Govt Good News Womens
Highlights

ಕರ್ನಾಟಕದಲ್ಲಿ ಸ್ತ್ರೀಶಕ್ತಿ ಸಂಘಗಳು ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಮತ್ತು ದೇಶಾದ್ಯಂತ ಇರುವ ಮಹಿಳಾ  ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದಕ್ಕೆಂದೇ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 

ನವದೆಹಲಿ : ಕರ್ನಾಟಕದಲ್ಲಿ ಸ್ತ್ರೀಶಕ್ತಿ ಸಂಘಗಳು ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಮತ್ತು ದೇಶಾದ್ಯಂತ ಇರುವ ಮಹಿಳಾ  ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದಕ್ಕೆಂದೇ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಅದರ ವರದಿಯನ್ವಯ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. 

ಆಂಧ್ರಪ್ರದೇಶದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದಕ್ಕೆಂದೇ ಶ್ರೀನಿಧಿ ಕೋ ಆಪರೇಟಿವ್ ಸೊಸೈಟಿ ಇದೆ. ಅದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳುವ ಮಹಿಳಾ ಸ್ವಸಹಾಯ ಸಂಘಗಳು ಅವುಗಳನ್ನು ಪ್ರಾಮಾಣಿಕವಾಗಿ ಮರಳಿಸುತ್ತಿವೆ. ಅದೇ ವೇಳೆ, ಸ್ವಸಹಾಯ ಸಂಘಗಳಿಗೆ ಸಾಲದ ಅಗತ್ಯ ಹೆಚ್ಚಿದ್ದರೂ ಅವು ಬ್ಯಾಂಕುಗಳ ಷರತ್ತುಗಳನ್ನು ಸರಿಯಾಗಿ ಪೂರೈಸದೇ ಇರುವುದರಿಂದ ಅವುಗಳಿಗೆ ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುವುದಿಲ್ಲ.

ಹೀಗಾಗಿ, ಮಹಿಳಾ ಸಬಲೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿರುವ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಆಂಧ್ರದ ಶ್ರೀನಿಧಿ ಕೋ ಆಪರೇಟಿವ್ ಸೊಸೈಟಿಯನ್ನು ಮಾದರಿಯಾಗಿಟ್ಟು ಕೊಂಡು ವಿಶೇಷ ಬ್ಯಾಂಕ್ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 

ದೇಶಾದ್ಯಂತ ಬ್ಯಾಂಕುಗಳಿಗೆ ಮರುಪಾವತಿ ಯಾಗದಿರುವ ಸಾಲದ ಪ್ರಮಾಣ (ಎನ್‌ಪಿಎ) ಶೇ.9.9 ಇದ್ದರೆ ಸ್ವಸಹಾಯ ಸಂಘಗಳು ಬಾಕಿ ಉಳಿಸಿಕೊಂಡಿರುವ ಸಾಲದ ಪ್ರಮಾಣ ಕೇವಲ ಶೇ.2.4ರಷ್ಟಿದೆ. ಇದರಿಂದ ಉತ್ತೇಜಿತಗೊಂಡು ಪ್ರತ್ಯೇಕ ಬ್ಯಾಂಕ್‌ನ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕ ‘ಭಾರತೀಯ ಮಹಿಳಾ ಬ್ಯಾಂಕ್’ ಸ್ಥಾಪಿಸಲಾಗಿತ್ತು. ಅದು ಕಳೆದ ವರ್ಷ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ವಿಲೀನಗೊಂಡಿದೆ.

loader