ಬಜೆಟ್ : ನಿಮ್ಮ ಜೇಬಿಗೆ ಸಂಬಂಧಿಸಿದ 10 ಪ್ರಮುಖ ವಿಚಾರಗಳು..!

First Published 2, Feb 2018, 11:57 AM IST
Union Budget 2018 News
Highlights

ವೈಯಕ್ತಿಕ ಹಣಕಾಸಿನ ವಿಷಯಕ್ಕೆ ಬಂದರೆ ಇದು ‘ಗಿವ್ ಅಂಡ್ ಟೇಕ್’ ಬಜೆಟ್. ಆದರೆ, ಜನರಿಗೆ ಜೇಟ್ಲಿ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಜಾಸ್ತಿ ಎಂಬುದು ಗಮನಾರ್ಹ!

ನವದೆಹಲಿ : ವೈಯಕ್ತಿಕ ಹಣಕಾಸಿನ ವಿಷಯಕ್ಕೆ ಬಂದರೆ ಇದು ‘ಗಿವ್ ಅಂಡ್ ಟೇಕ್’ ಬಜೆಟ್. ಆದರೆ, ಜನರಿಗೆ ಜೇಟ್ಲಿ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಜಾಸ್ತಿ ಎಂಬುದು ಗಮನಾರ್ಹ!

ಒಂದೆಡೆ ಅವರು ಸ್ಟಾಂಡರ್ಡ್ ಡಿಡಕ್ಷನ್ ಮತ್ತೆ ಜಾರಿಗೆ ತಂದಿದ್ದಾರೆ. ಹಿರಿಯ ನಾಗರಿಕರಿಗೆ ಒಂದಷ್ಟು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ನೌಕರಸ್ಥ ಮಹಿಳೆಯರಿಗೆ ಲಾಭ ಮಾಡಿಕೊಟ್ಟಿದ್ದಾರೆ. ಆದರೆ, ಇನ್ನೊಂದು ಕೈಯಲ್ಲಿ ನೌಕರಸ್ಥರ ವೈದ್ಯಕೀಯ ಮತ್ತು ಸಾರಿಗೆ ಭತ್ಯೆಯನ್ನು ಕಿತ್ತುಕೊಂಡಿದ್ದಾರೆ. ಶೇರು ಹಾಗೂ ಮ್ಯೂಚುವಲ್ ಫಂಡ್‌ಗಳ ಮೇಲೆ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ತೆರಿಗೆ ಮತ್ತೆ ಹೇರಿದ್ದಾರೆ. ಕೊನೆಗೆ, ನಾವು ಪಾವತಿಸುವ ತೆರಿಗೆಯ ಮೇಲೆ ವಿಧಿಸುವ ಮೇಲ್ತೆರಿಗೆಯನ್ನೂ ಶೇ.1ರಷ್ಟು ಹೆಚ್ಚಿಸಿದ್ದಾರೆ. ಹಾಗಿದ್ದರೆ ನಿಮ್ಮ ಈ ವರ್ಷದ ಖರ್ಚು ವೆಚ್ಚಗಳ ಮೇಲೆ ಬಜೆಟ್ ಯಾವ ರೀತಿ ಪರಿಣಾಮ ಬೀರುತ್ತದೆ? ಪ್ರಮುಖ ಸಂಗತಿಗಳು ಇಲ್ಲಿವೆ.

1 ಆದಾಯ ತೆರಿಗೆ ಸ್ಲ್ಯಾಬ್ ಬದಲಿಲ್ಲ 

ಕಳೆದ ಮೂರು ವರ್ಷಗಳಲ್ಲಿ ಜನಸಾಮಾನ್ಯ ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡಲು ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ ಎಂಬ ಕಾರಣ ನೀಡಿ ಈ ಬಾರಿ ಅರುಣ್ ಜೇಟ್ಲಿ ಅವರು ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತೆರಿಗೆ ವಿನಾಯ್ತಿ ಮಿತಿಯನ್ನೂ ಹೆಚ್ಚಿಸಿಲ್ಲ.

2 ಆದಾಯ ತೆರಿಗೆ ಸೆಸ್ ಶೇ.4ಕ್ಕೇರಿಕೆ

ಎಲ್ಲಾ ರೀತಿಯ ಆದಾಯ ತೆರಿಗೆದಾರರಿಗೂ ಬಿಸಿ ಮುಟ್ಟಿಸಿದ ಅಂಶವಿದು. ಜನರು ಪಾವತಿಸುವ ಆದಾಯ ತೆರಿಗೆ ಮೇಲೆ ಇಲ್ಲಿಯವರೆಗೆ ಶೇ.3ರಷ್ಟು ಮೇಲ್ತೆರಿಗೆ ಪಾವತಿಸಬೇಕಿತ್ತು. ಅದನ್ನು ಈ ಬಾರಿ ಶೇ.4ಕ್ಕೆ ಏರಿಸಲಾಗಿದೆ. ಅಂದರೆ, 2.5ರಿಂದ 5 ಲಕ್ಷ ರು.ವರೆಗಿನ ಆದಾಯದವರು 125 ರು., 5ರಿಂದ 10 ಲಕ್ಷ ರು.ವರೆಗಿನ ಆದಾಯದವರು 1125 ರು., 15 ಲಕ್ಷ ರು.ಗಿಂತ ಹೆಚ್ಚಿನ ಆದಾಯದವರು ಕನಿಷ್ಠ 2625 ರು. ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ.

3 ಮತ್ತೆ ಬಂತು ಸ್ಟಾಂಡರ್ಡ್ ಡಿಡಕ್ಷನ್ ಸಂಬಳ ತೆಗೆದುಕೊಳ್ಳುವ ನೌಕರ ವರ್ಗದವರಿಗೆ ಅನುಕೂಲ ಮಾಡಿಕೊಡಲು ಸ್ಟಾಂಡರ್ಡ್ ಡಿಡಕ್ಷನ್ ವ್ಯವಸ್ಥೆ ಮತ್ತೆ ಬಂದಿದೆ. ಅಂದರೆ, ನೌಕರರು ತಮ್ಮ ಆದಾಯದಲ್ಲಿ 40000 ರು. ಕಳೆದು ತೆರಿಗೆ ಪಾವತಿಸಿದರಾಯಿತು. 2005ರವರೆಗೆ ಇದು ಆದಾಯ ತೆರಿಗೆ ಕಾಯ್ದೆಯಲ್ಲಿತ್ತು. ನಂತರ ಪಿ.ಚಿದಂಬರಂ ರದ್ದುಪಡಿಸಿದ್ದರು. ಈಗ ಮತ್ತೆ ಬಂದಿದೆ.

4 ವೈದ್ಯಕೀಯ, ಸಾರಿಗೆ ವೆಚ್ಚ ಮರುಪಾವತಿ ಇಲ್ಲ

40000 ರು. ಸ್ಟಾಂಡರ್ಡ್ ಡಿಡಕ್ಷನ್ ನೀಡಿರುವ ಅರುಣ್ ಜೇಟ್ಲಿ, ಅದಕ್ಕೆ ಪ್ರತಿಯಾಗಿ ಇಷ್ಟು ವರ್ಷ ಸಂಬಳದಾರರಿಗೆ ಲಭಿಸುತ್ತಿದ್ದ 19200ರು. ಸಾರಿಗೆ ಭತ್ಯೆ ಹಾಗೂ 15000 ರು. ವೈದ್ಯಕೀಯ ವೆಚ್ಚ ಮರುಪಾವತಿ ಭತ್ಯೆ ರದ್ದುಪಡಿಸಿದ್ದಾರೆ. ಮೇಲ್ನೋಟಕ್ಕೆ ಇದರಿಂದ 2800 ರು.ಗೆ ತೆರಿಗೆ ಉಳಿತಾಯವಾಗುತ್ತದೆ ಎಂಬಂತೆ ತೋರುತ್ತದೆ.

ಆದರೆ, ತೆರಿಗೆಯ ಮೇಲಿನ ಸೆಸ್ ಶೇ.1ರಷ್ಟು ಹೆಚ್ಚಿರುವುದರಿಂದ 5 ಲಕ್ಷ ರು.ಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಇವೆರಡು ಭತ್ಯೆಗಳು ರದ್ದಾಗಿ ಸ್ಟಾಂಡರ್ಡ್ ಡಿಡಕ್ಷನ್ ಲಭಿಸುತ್ತದೆ. ಹಾಗಾಗಿ ಕೊನೆಯಲ್ಲಿ ಏನೂ ಉಳಿಯುವುದಿಲ್ಲ!

5 ಮಹಿಳೆಯರಿಗೆ ಇಪಿಎಫ್ ಲಾಭ

ಹೊಸತಾಗಿ ಕೆಲಸಕ್ಕೆ ಸೇರುವ ಮಹಿಳೆಯರು ಮೊದಲ ಮೂರು ವರ್ಷಗಳ ಕಾಲ ಇಪಿಎಫ್‌ಗೆ ತಮ್ಮ ಸಂಬಳದ ಶೇ.12 ಅಥವಾ ಶೇ.10ರಷ್ಟು ನೀಡುವ ಬದಲು ಶೇ.8ರಷ್ಟು ಹಣ ಮಾತ್ರ ನೀಡಿದರೆ ಸಾಕು. ಹೀಗಾಗಿ ಅವರಿಗೆ ಕೈಗೆ ಸಿಗುವ ಸಂಬಳದ ಪಾಲು ಹೆಚ್ಚುತ್ತದೆ. ಹಾಗೆಯೇ, ಇಪಿಎಫ್‌ಒ ಅಡಿ ಬರುವ ಹೊಸ ನೌಕರರಿಗೆ ಸರ್ಕಾರ ಶೇ.12ರಷ್ಟು ಹಣ ಪಾವತಿಸುತ್ತದೆ.

6 ಶೇರು ಲಾಭಕ್ಕೆ ‘ಹೊಸ’ ತೆರಿಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆ (ಎಲ್ ಟಿಸಿಜಿ)ಯನ್ನು ಈ ಸಲದಿಂದ ಮತ್ತೆ ಜಾರಿಗೊಳಿಸಲಾಗಿದೆ. ಶೇರು

ಅಥವಾ ಮ್ಯೂಚುವಲ್ ಫಂಡ್ ಖರೀದಿಸಿ ಒಂದು ವರ್ಷದ ನಂತರ ಮಾರಿದರೆ, ಅದರಿಂದ 1 ಲಕ್ಷ ರು.ಗಿಂತ ಹೆಚ್ಚಿನ ಲಾಭವೇನಾದರೂ ಬಂದರೆ ಶೇ.10ರಷ್ಟು ಎಲ್‌ಟಿಸಿಜಿ ತೆರಿಗೆ ಪಾವತಿಸಬೇಕು. ಸದ್ಯ ಶೇರಿನ ಲಾಭದ ಮೇಲೆ ಈ ತೆರಿಗೆ ಇರಲಿಲ್ಲ. ಸದ್ಯ ಎಸ್‌ಟಿಟಿ ಮತ್ತು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆ (ಎಸ್‌ಟಿಜಿಟಿ) ಮಾತ್ರ ಇದ್ದವು. ಎಲ್‌ಟಿಸಿಜಿ ಜಾರಿಯಿಂದ ಶೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆ ಲಾಭದಾಯಕ ಎಂಬ ಕಲ್ಪನೆ ಕೊಂಚ ಬದಲಾಗಲಿದೆ.

7 ಹಿರಿಯ ನಾಗರಿಕರಿಗೆ ೮೦ಡಿ ಗಿಫ್ಟ್

ಇಷ್ಟು ದಿನ ಹಿರಿಯ ನಾಗರಿಕರು ಆರೋಗ್ಯ ವಿಮೆ ಪ್ರೀಮಿಯಂ ಪಾವತಿಸಿದ್ದರೆ ಅಥವಾ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗಳಿಗಾಗಿ ವೆಚ್ಚ ಮಾಡಿದ್ದರೆ 30000 ರು.ವರೆಗೆ ಸೆಕ್ಷನ್ 80ಡಿ ಅಡಿ ತೆರಿಗೆ ವಿನಾಯ್ತಿ ಪಡೆಯಬಹುದಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ವಿನಾಯ್ತಿ ಮಿತಿಯನ್ನು 50000 ರು.ಗೆ ಏರಿಸಲಾಗಿದೆ.

8 ವೃದ್ಧರ ಎಫ್‌ಡಿಗೆ ತೆರಿಗೆ ಕಮ್ಮಿ

ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರು ಇರಿಸುವ ನಿಶ್ಚಿತ ಠೇವಣಿಗೆ 50000ರು.ವರೆಗೆ ಬಡ್ಡಿ ಬಂದರೆ ಅದಕ್ಕೆ ತೆರಿಗೆ ಪಾವತಿಸಬೇಕಿಲ್ಲ. ಇಷ್ಟು ದಿನ 10000 ರು. ಗಿಂತ ಕಡಿಮೆ ಬಡ್ಡಿ ಬಂದರೆ ಮಾತ್ರ ತೆರಿಗೆ ವಿನಾಯ್ತಿಯಿತ್ತು. ಆಮಿತಿ ಈಗ 50000ರು.ಗೆ ಏರಿದೆ. ಇಷ್ಟು ಬಡ್ಡಿಗೆ ಬ್ಯಾಂಕುಗಳು ಟಿಡಿಎಸ್ ಕಡಿತ ಮಾಡುವುದಿಲ್ಲ.

9 ಮ್ಯೂಚುವಲ್ ಫಂಡ್ ತೆರಿಗೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಗೆ ಈ ಬಾರಿ ಶೇ.10ರಷ್ಟು ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ (ಡಿಡಿಟಿ) ವಿಧಿಸಲಾಗಿದೆ. ಇದರಿಂದಾಗಿ ಇನ್ನುಮುಂದೆ ಮ್ಯೂಚುವಲ್ ಫಂಡ್‌ಗಳಿಂದ ಹೂಡಿಕೆದಾರರಿಗೆ ಸಿಗುವ ಡಿವಿಡೆಂಡ್ ಮೊತ್ತ ಕಡಿಮೆಯಾಗಲಿದೆ.

10 ವಯವಂದನ ಮಿತಿ 15 ಲಕ್ಷಕ್ಕೇರಿಕೆ


ಹಿರಿಯ ನಾಗರಿಕರಿಗಾಗಿ ಎಲ್‌ಐಸಿ ಜಾರಿಗೆ ತಂದಿರುವ ಪಿಂಚಣಿ ಯೋಜನೆ ಪ್ರಧಾನಮಂತ್ರಿ ವಯ ವಂದನ ಯೋಜನೆ (ಪಿಎಂವಿವಿವೈ)ಗೆ ಇಷ್ಟು ದಿನ ಇದ್ದ ಹೂಡಿಕೆ ಮಿತಿ 7.5 ಲಕ್ಷ ರು.ಗಳನ್ನು ಈ ಸಲದ ಬಜೆಟ್‌ನಲ್ಲಿ 15 ಲಕ್ಷ ರು. ಗೇರಿಸಲಾಗಿದೆ. ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ಶೇ.8ರ ನಿಶ್ಚಿತ ಆದಾಯ ಖಾತ್ರಿಪಡಿಸಲಾಗಿದೆ.

loader