Asianet Suvarna News Asianet Suvarna News

ಬರಲಿದೆ ಹೊಸ ಡಿಎಲ್, ಆರ್‌ಸಿ: ಫಿಂಗರ್ ಟಿಪ್ ಮೇಲೆ ಮಾಹಿತಿ!

ಶೀಘ್ರದಲ್ಲೇ ಹೊಸ ಚಾಲನಾ ಪರವಾನಿಗೆ ಕಾರ್ಡ್ ! ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌! ಒಂದೇ ರೀತಿಯ ನೋಟ, ಬಣ್ಣ, ಭದ್ರತಾ ವೈಶಿಷ್ಟ್ಯಗಳು! ಆರ್‌ಸಿಯಲ್ಲಿ ಮಾಲಿನ್ಯದ ಪ್ರಮಾಣದ ವಿವರಗಳು! ತಪಾಸಣೆ ವೇಳೆ ಪೊಲೀಸರಿಗೆ ಸಿಗಲಿದೆ ಸುಲಭ ಮಾಹಿತಿ

Uniform Smart Driving Licenses across India soon
Author
Bengaluru, First Published Oct 14, 2018, 3:24 PM IST

ನವದೆಹಲಿ(ಅ.14): ಚಾಲನಾ ಪರವಾನಿಗೆ ಕುರಿತಾದ ತೊಡಕುಗಳಿಗೆ ಇತಿಶ್ರೀ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದೆ. ಮುಂದಿನ ಜುಲೈನಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್‌ ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು (ಆರ್‌ಸಿ) ವಿತರಣೆಯಾಗಲಿವೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಈ ಪ್ರಮಾಣಪತ್ರಗಳ ನೋಟ, ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸ್ಮಾರ್ಟ್‌ ಡಿಎಲ್‌ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸಲಿದ್ದು, ಕ್ಯೂ ಆರ್‌ ಕೋಡ್‌ಗಳನ್ನೂ ಹೊಂದಿರುತ್ತವೆ. ಅವುಗಳಲ್ಲಿ ಎನ್‌ಎಫ್‌ಸಿ (ನಿಯರ್ ಫೀಲ್ಡ್‌ ಕಮ್ಯುನಿಕೇಶನ್‌) ವೈಶಿಷ್ಟ್ಯವನ್ನೂ ಅಳವಡಿಸಲಾಗುತ್ತಿದ್ದು ಮೆಟ್ರೋ ಮತ್ತು ಎಟಿಎಂ ಕಾರ್ಡ್‌ಗಳ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಟ್ರಾಫಿಕ್‌ ಪೊಲೀಸರು ವಿಶೇಷ ಸಾಧನಗಳ ಮೂಲಕ (ಹ್ಯಾಂಡ್‌ಹೆಲ್ಡ್‌ ಡಿವೈಸಸ್‌) ಈ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿ ಎಲ್ಲಾ ವಿವರ ಪಡೆಯಬಹುದಾಗಿದೆ. 

ಮಾಲಿನ್ಯದ ಪ್ರಮಾಣ ಮತ್ತು ಇತರ ನಿಯಮಗಳನ್ನು ಆರ್‌ಸಿಯಲ್ಲಿ ಅಳವಡಿಸಲಾಗಿರುತ್ತದೆ. ಇದರಿಂದ ಮಾಲಿನ್ಯ ಪರೀಕ್ಷೆಯ ವೇಳೆ ಅನುಕೂಲವಾಗುತ್ತದೆ. ಪ್ರಸ್ತುತ ಈ ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ವಾಹನದ ಮಾಲೀಕರು ಮತ್ತು ಇತರ ವಿವರಗಳ ಬಗ್ಗೆ ಪ್ರಶ್ನಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ದೇಶಾದ್ಯಂತ ಪ್ರತಿದಿನ ಸುಮಾರು 32 ಸಾವಿರ ಡಿಎಲ್ ಗಳ ನವೀಕರಣ ನಡೆಯುತ್ತಿದ್ದು, 43 ಸಾವಿರ ವಾಹನಗಳ ನೋಂದಣಿ ನಡೆಯುತ್ತದೆ. ಇನ್ನು ಮುಂದೆ ನವೀಕರಣಗೊಳ್ಳುವ ಎಲ್ಲಾ ಡಿಎಲ್‌ ಮತ್ತು ಆರ್‌ಸಿಗಳನ್ನು ಹೊಸದಕ್ಕೆ ಬದಲಾಯಿಸಲಾಗುತ್ತದೆ. 

ನಿರ್ದಿಷ್ಟ ವಾಹನದ ಅಥವಾ ಚಾಲಕನ ವಿವರ ಹೊಂದಿರುವ ಯುಆರ್‌ಎಲ್‌ಗೆ ನೇರ ಸಂಪರ್ಕಿಸುವುದರಿಂದ ವಾಹನ ಮತ್ತು ಸಾರಥಿ ಡೇಟಾಬೇಸ್‌ಗಳಿಂದ ಕ್ಷಿಪ್ರವಾಗಿ ವಿವರ ಪಡೆಯಬಹುದು ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.

Follow Us:
Download App:
  • android
  • ios