ಗದಗ[ಜೂ.20]: ರಾಜ್ಯದಲ್ಲಿ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಿದೆ, ಜೆಡಿಎಸ್ ಶಾಸಕರೊಬ್ಬರಿಗೆ ₹10ಕೋಟಿ ಆಮಿಷ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ ಬೆನ್ನಲ್ಲೇ ಈಗ ವಿಜಯ ಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್‌ನಿಂದ ಯಾರೂ ನಿರೀಕ್ಷಿಸದ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಹೆಸರು ಕೇಳಿದ್ರೆ ಗಾಬರಿಯಾಗ್ತೀರಿ. ಅನೇಕ ನಾಯಕರು ಅವಕಾಶಕ್ಕಾಗಿ ಕಾಯ್ತಿದ್ದಾರೆ ಎಂದು ಮತ್ತಷ್ಟು ಕುತೂಹಲಕ್ಕೆ ಸೃಷ್ಟಿಸಿದರು.

ಮಾಧ್ಯಮದವರು ಯಾವ ಪಕ್ಷದಿಂದ ಎಂದಾಗ ನಗುತ್ತಲೇ ಕಾಂಗ್ರೆಸ್-ಜೆಡಿಎಸ್‌ನ ಪ್ರಭಾವಿ ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಅವರೆಲ್ಲರೂ ಒಂದು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತವಾಗಿ ಬಿಜೆಪಿಗೆ ಸೇರಲಿದ್ದಾರೆ. ಯಾರೆಂದು ಈಗಲೇ ಹೇಳಲ್ಲ. ಅನೇಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದರು.