‘ಗೌರಿ ಲಂಕೇಶ್ ಅವರು ಭಾರತದಲ್ಲಿ ನಡೆಯುತ್ತಿದ್ದ ಜನಾಂಗೀಯ ದ್ವೇಷ ಹಾಗೂ ಮತೀಯವಾದದ ವಿರುದ್ಧ ಹೋರಾಡುತ್ತಿದ್ದರು. ಅಂಥವರ ಹತ್ಯೆ ಖಂಡನಾರ್ಹ. ಮೂಲಭೂತ ಮಾನವ ಹಕ್ಕುಗಳ ಪರ ಮಾತನಾಡುವವರನ್ನು ಬೆದರಿಸಲಾಗುತ್ತಿದೆ’
ಜಿನೇವಾ(ಸೆ.11): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಅಧ್ಯಕ್ಷ ಝಯೇದ್ ರಾದ್ ಅಲ್ ಹುಸೇನ್ ಸೋಮವಾರ ಖಂಡಿಸಿದ್ದಾರೆ.
‘ಗೌರಿ ಲಂಕೇಶ್ ಅವರು ಭಾರತದಲ್ಲಿ ನಡೆಯುತ್ತಿದ್ದ ಜನಾಂಗೀಯ ದ್ವೇಷ ಹಾಗೂ ಮತೀಯವಾದದ ವಿರುದ್ಧ ಹೋರಾಡುತ್ತಿದ್ದರು. ಅಂಥವರ ಹತ್ಯೆ ಖಂಡನಾರ್ಹ. ಮೂಲಭೂತ ಮಾನವ ಹಕ್ಕುಗಳ ಪರ ಮಾತನಾಡುವವರನ್ನು ಬೆದರಿಸಲಾಗುತ್ತಿದೆ’ ಎಂದಿದ್ದಾರೆ.
ಅಲ್ಲದೆ, ಗೌರಿ ಹತ್ಯೆಯ ಹಿನ್ನೆಲೆಯಲ್ಲಿ ವಿವಿಧ ನಗರಗಳಲ್ಲಿ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಅವರು, ‘ದೇಶದ ೧೨ ನಗರಗಳಲ್ಲಿ ನಡೆದ ವಾಕ್ ಸ್ವಾತಂತ್ರ್ಯ ಪರ ಪ್ರತಿಭಟನೆಗಳನ್ನು ಕಂಡು ನನಗೆ ನೋವಾಗುತ್ತಿದೆ’ ಎಂದೂ ಹೇಳಿದ್ದಾರೆ. ತಥಾಕಥಿತ ಗೋರಕ್ಷಕರಿಂದ ನಡೆಯುವ ಹಲ್ಲೆಗಳನ್ನೂ ಹುಸೇನ್ ಖಂಡಿಸಿದ್ದಾರೆ. ಇದೇ ವೇಳೆ ವಿಶ್ವಸಂಸ್ಥೆಯಿಂದ ನಿರಾಶ್ರಿತರು ಎಂಬ ಮಾನ್ಯತೆ ಪಡೆದ ಮ್ಯಾನ್ಮಾರ್‌ನ ರೋಹಿಂಗ್ಯ ಮುಸ್ಲಿಮರನ್ನು ಭಾರತ ಗಡೀಪಾರು ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
