ಕಲಬುರಗಿ: ಮಲ್ಲಿಕಾರ್ಜುನ್‌ ಖರ್ಗೆ ಕಾಲಿಗೆ ಬಿದ್ದು ಸುಭಾಷ್‌ ರಾಠೋಡ್‌ ಚಿಂಚೋಳಿ ಕ್ಷೇತ್ರದ ಟಿಕೆಟ್‌ ಪಡೆದಿದ್ದಾರೆ ಎಂದು ಮಾಜಿ ಶಾಸಕ ಡಾ. ಉಮೇಶ್‌ ಜಾಧವ್‌ ಆರೋಪಿಸಿದ್ದಾರೆ. ಚಿಂಚೋಳಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಸುಭಾಷ್‌ ರಾಠೋಡ್‌ ನಾಲ್ಕೈದು ಬಾರಿ ಪಕ್ಷ ಬದಲಿಸಿದ್ದಾರೆ. 

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹೋರಾಟ ಮಾಡಿದ್ದ ರಾಠೋಡ್‌, ಈಗ ಖರ್ಗೆ ಕಾಲಿಗೆ ಬಿದ್ದು ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದಾರೆ. ನಾನು ಊಟ ಮಾಡಿದ ತಟ್ಟೆಗೆ ಬೆಲೆ ಕೊಡುತ್ತೇನೆ. ಆದರೆ ಸುಭಾಷ್‌ ಊಟದ ತಟ್ಟೆಗೆ ಒದ್ದಿದ್ದಾರೆ. ಅವರನ್ನು ಜನ ತಿರಸ್ಕರಿಸುತ್ತಾರೆ ಎಂದರು. 

ಚಿಂಚೋಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಠೋಡ್‌ ನೀತಿಗೆಟ್ಟವರು. ಆದರೆ ನಾನು ನೀತಿಗೆಟ್ಟವನಲ್ಲ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದೆ. ವಿಧಾನಸಭೆ ಉಪಚುನಾವಣೆಯಲ್ಲಿ ಸುಭಾಷ್‌ ಸೋತು ಮತ್ತೆ ಬೇರೆ ಪಕ್ಷಕ್ಕೆ ಸೇರುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ನನ್ನ ರಾಜಕೀಯ ಗುರುಗಳಾಗಿದ್ದಾರೆ. ನಾಳೆ ಚಿಂಚೋಳಿ ಅವರು ತಮ್ಮ ಕೆಲಸ ತಾವು ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾರ ವಿರುದ್ಧ ಬೇಕಾದರೂ ಪ್ರಚಾರ ಮಾಡಬಹುದು. ಚಿಂಚೋಳಿಯಲ್ಲಿ ಸಿದ್ದರಾಮಯ್ಯ ಅವರ ಹವಾ ಇದೆಯೇ ಎಂಬುದು ಮೇ 23ರಂದು ಗೊತ್ತಾಗಲಿದೆ. ಜಾಧವ್‌ ಅವರ ಹವಾ ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.