ಬೆಂಗಳೂರು (ಜೂ. 22): ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಮಾಜಿ ಸಚಿವೆ ಉಮಾಶ್ರೀ ನ್ಯಾಯಾಧೀಶರ ಎದುರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ ಉಮಾಶ್ರೀ ಅವರ ವಿರುದ್ಧ ಹಾಲಪ್ಪ ಮಾನನಷ್ಟಮೊಕದ್ದಮೆ ದಾಖಲಿಸಿದ್ದರು. ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಉಮಾಶ್ರೀ ಮತ್ತು ಹಾಲಪ್ಪ ಹಾಜರಾಗಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ್‌, ಜನಪ್ರತಿನಿಧಿಗಳಿಗೆ ಕೆಲಸ ಮಾಡುವುದಕ್ಕೇ ಸಮಯ ಇರುವುದಿಲ್ಲ. ರಾಜಕೀಯದವರು ಯಾವಾಗಲೂ ಸ್ನೇಹದಿಂದ ಬದುಕಬೇಕು. ಚುನಾಯಿತ ಪ್ರತಿನಿಧಿಗಳು ತಪ್ಪು ಮಾಡಬಾರದು. ನಿಮ್ಮ ಸಮಯವನ್ನು ಜನರ ಸೇವೆಗೆ ಮೀಸಲಿಡಿ, ಕಿತ್ತಾಟಕ್ಕೆ ಅಲ್ಲ ಎಂದು ಕಿವಿಮಾತು ಹೇಳಿದರು.

ಇಬ್ಬರಿಗೂ ಪ್ರಕರಣದ ಬಗ್ಗೆ ಹೊರಗೆ ಚರ್ಚೆ ನಡೆಸಿ ತಿಳಿಸಿ ಎಂದು ಹೇಳಿದರು. ಈ ವೇಳೆ ತಮ್ಮ ವಕೀಲರೊಂದಿಗೆ ಚರ್ಚಿಸಿದ ಉಮಾಶ್ರೀ ಅವರು, ನಂತರ ನ್ಯಾಯಾಧೀಶರ ಎದುರು ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ.

ರಾಜಕೀಯ ಉದ್ವೇಗದಿಂದ ಆ ರೀತಿ ಮಾತನಾಡಿದ್ದೆ. ಈಗ ಆ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ನಂತರ ಹಾಲಪ್ಪ ಮತ್ತು ಉಮಾಶ್ರೀ ಅವರು ಪರಸ್ಪರ ಕೈ-ಕುಲುಕಿ ರಾಜಿ ಸಂಧಾನ ಮಾಡಿಕೊಂಡರು.

2014 ರಲ್ಲಿ ದಾಖಲಾಗಿದ್ದ ಪ್ರಕರಣ:

2014ರಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಉಮಾಶ್ರೀ ಅವರು, ಬಿಜೆಪಿಯವರನ್ನು ಮನೆಗೆ ಸೇರಿಸಬಾರದು. ಹಾಲಪ್ಪ ಅವರನ್ನು ಸ್ನೇಹಿತ ತನ್ನ ಮನೆಗೆ ಸೇರಿಸಿದ್ದಕ್ಕೆ ಸ್ನೇಹಿತನ ಕುಟುಂಬಕ್ಕೆ ಸಮಸ್ಯೆಯಾಯಿತು ಎಂದು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು.

ಈ ಬಗ್ಗೆ ಹರತಾಳು ಹಾಲಪ್ಪ ಅವರು ಸೊರಬ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದಲ್ಲಿ ಉಮಾಶ್ರೀ ವಿರುದ್ಧ ಮಾನನಷ್ಟಮೊಕದ್ದಮೆ ದಾಖಲಿಸಿದ್ದರು. ವೈಯಕ್ತಿಕ ನಿಂದನೆ ಮಾಡಿದ್ದಾರೆಂದು ಉಮಾಶ್ರೀ ವಿರುದ್ಧ ದೂರಿನಲ್ಲಿ ಆರೋಪಿಸಿದ್ದರು. ನಂತರ ಈ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.