ನವದೆಹಲಿ[ಜು.19]: ಭಾರತದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರು. ವಂಚಿಸಿ ಲಂಡನ್‌ನಲ್ಲಿ ಐಷಾರಾಮಿ ಜೀವನ ಕಳೆಯುತ್ತಿರುವ ವಿಜಯ್‌ ಮಲ್ಯ 2020ರ ಫೆ. 11ವರೆಗೂ ಭಾರತಕ್ಕೆ ಗಡೀಪಾರಾಗುವ ಭೀತಿಯಿಂದ ಪಾರಾಗಿದ್ದಾರೆ.

ತನ್ನನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂಬ ಆದೇಶ ಪ್ರಶ್ನಿಸಿ ಮಲ್ಯ ಬ್ರಿಟನ್‌ನ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು 2020ರ ಫೆಬ್ರವರಿ 11ರಿಂದ ಮೂರು ದಿನಗಳವರೆಗೆ ನಿಗದಿಗೊಳಿಸಿರುವುದಾಗಿ ಬ್ರಿಟನ್‌ ಕೋರ್ಟ್‌ ಗುರುವಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಗಡೀಪಾರಾಗುವ ಅಪಾಯದಿಂದ ಪಾರಾಗಿರುವ ಮಲ್ಯ ನಿರಾಳರಾಗಿದ್ದಾರೆ.

2018ರ ಡಿಸೆಂಬರ್‌ನಲ್ಲಿ ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ಆರ್ಥಿಕ ಭ್ರಷ್ಟಾಚಾರಿ ಎಂಬ ಆರೋಪಕ್ಕೆ ಗುರಿಯಾಗಿರುವ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂಬ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಹೊರಡಿಸಿದ ಆದ್ಯಾದೇಶಕ್ಕೆ ಬ್ರಿಟನ್‌ ಗೃಹ ಸಚಿವ ಸಜಿದ್‌ ಜಾವೇದ್‌ ಸಹಿ ಹಾಕಿದ್ದರು.

ಆದರೆ, ಈ ಆದ್ಯಾದೇಶದ ವಿರುದ್ಧ ಲಂಡನ್‌ನಲ್ಲಿರುವ ರಾಯಲ್‌ ಕೋಟ್ಸ್‌ರ್‍ಗೆ ಮಲ್ಯ ಮೇಲ್ಮನವಿ ಹೋಗಿದ್ದರು. ಈ ಬಗ್ಗೆ ಜು.2ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ತಮ್ಮ ವಿರುದ್ಧದ ಗಡೀಪಾರು ಆದೇಶದ ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು.