ಲಂಡನ್‌: 9,000 ಕೋಟಿ ರು. ಸಾಲ ಪಡೆದು ವಂಚಿಸಿ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಂದ ಭಾರತದ ಬ್ಯಾಂಕ್‌ಗಳು ಆಸ್ತಿ ವಶಕ್ಕೆ ಪಡೆಯಲು ಅನುವು ಮಾಡಿಕೊಡುವ ನೆರವಾಗುವ ಜಾರಿ ಆದೇಶವೊಂದನ್ನು ಬ್ರಿಟನ್‌ನ ಹೈಕೋರ್ಟ್‌ ಹೊರಡಿಸಿದೆ. ಭಾರತದ 13 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪರವಾಗಿ ಈ ಆದೇಶ ಹೊರಡಿಸಲಾಗಿದೆ.

ಹೀಗಾಗಿ ಅಗತ್ಯ ಬಿದ್ದಲ್ಲಿ ಅಧಿಕಾರಿಗಳು ಮಲ್ಯ ವಾಸವಾಗಿರುವ ಲಂಡನ್‌ನ ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ಮಲ್ಯರ ಮನೆ ಸೇರಿದಂತೆ ಅವರ ಆಸ್ತಿ ಇರುವ ಪ್ರದೇಶಗಳನ್ನು ಪ್ರವೇಶಿಸಬಹುದಾಗಿದೆ. ಈ ಮೂಲಕ ಆಸ್ತಿ ವಶಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಜೂನ್‌ 26ರ ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ಹಾಗೆಂದು ಇದು, ಮಲ್ಯರ ಮನೆ ಪ್ರವೇಶಿಸಿ ಅವರ ಆಸ್ತಿ ವಶಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸುವ ಆದೇಶವಲ್ಲ. ಈ ಆದೇಶವನ್ನು ಬಳಸಿಕೊಂಡು ಅಧಿಕಾರಿಗಳು ಆಸ್ತಿ ವಶಕ್ಕೆ ಪ್ರಯತ್ನಿಸಬಹುದು. ಹೀಗಾಗಿ ಬ್ಯಾಂಕ್‌ಗಳು ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.