ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಸ್ಕಾಲರ್’ಶಿಪ್’ನಿಂದ ಹಿಡಿದು ಅಡುಗೆ ಅನಿಲ, ಬ್ಯಾಂಕ್ ಖಾತೆ, ಪಿಂಚಣಿ ಪಡೆಯುವವರೆಗೂ ಪ್ರತಿಯೊಂದಕ್ಕೂ ಆಧಾರ್ ಕಾರ್ಡನ್ನು ಒಂದು ರೀತಿಯಲ್ಲಿ ಕಡ್ಡಾಯಗೊಳಿಸಿರುವ ಸರ್ಕಾರ, ಈಗ ಆಧಾರ್ ಕಾರ್ಡ್ ಸಂಖ್ಯೆಯನ್ನು ಅಥವಾ ಪ್ರತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದಿದೆ.

ಕಾರ್ಡ್ ಸಂಖ್ಯೆಯನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳುವುದಾದರೆ, ಅದರ ದುರ್ಬಳಕೆಯನ್ನು ತಪ್ಪಿಸಲು, ಯಾವ ಕಾರಣಕ್ಕೆ ನೀಡಲಾಗುತ್ತಿದೆ ಎಂಬುವುದರ ಬಗ್ಗೆ ಸ್ಪಷ್ಟ ಸ್ವ-ಧೃಢೀಕರಣ ಪಡೆಯಿರಿ ಎಂದು ಆಧಾರ್ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಸೂಚಿಸಿದೆ.

 

ಇತ್ತೀಚೆಗೆ ರಿಲಯನ್ಸ್ ಜಿಯೋ, ಏರ್’ಟೆಲ್’ಗಳಂಥ ಖಾಸಗಿ ಸಂಸ್ಥೆಗಳಿಗೆ ಕೂಡಾ ಸರ್ಕಾರವು e-KYC ಯೋಜನೆಯಡಿ  ಆಧಾರ್ ಮಾಹಿತಿಯನ್ನು ಪಡೆಯುವಂತೆ ಅನುವು ಮಾಡಿಕೊಟ್ಟಿದೆ. ಅವುಗಳು ಕೂಡಾ ಹೊಸ ಸಿಮ್ ಒದಗಿಸಲು, ಗ್ರಾಹಕರಿಂದ ಆದ್ಯತೆ ಮೇರೆಗೆ ಆಧಾರ್ ಸಂಖ್ಯೆಯನ್ನೇ ಕೇಳಿ ಪಡೆಯುತ್ತಿವೆ.

ವಿಶಿಷ್ಟ ಗುರುತು ಸಂಖ್ಯೆಯನ್ನು ಬೇರ್ಯಾರೊಂದಿಗೂ ಹಂಚಿಕೊಳ್ಳಬೇಡಿ, ಹಂಚಿ ಕೊಳ್ಳುವಾಗ ಜಾಗರೂಕರಾಗಿರಿ, ಹಾಗೂ ಸ್ವ-ದೃಢೀಕರಣ ಮಾಡಿಕೊಳ್ಳಿ ಎಂದು ಆಧಾರ್ ಪ್ರಾಧಿಕಾರವು ಶುಕ್ರವಾರ  ಮಾಡಿರುವ ಟ್ವೀಟ್’ನಲ್ಲಿ ಹೇಳಿದೆ.

ಇನ್ನು ಸ್ವ-ದೃಢೀಕರಣದ ಬಗ್ಗೆಯೂ ಸ್ಪಷ್ಟತೆಯಿಲ್ಲ. ಆನ್-ಲೈನ್ ಅರ್ಜಿಗಳಲ್ಲಿ ಕಡ್ಡಾಯವಾಗಿ ಆಧಾರ್ ಸಂಖ್ಯೆ ನಮೂದಿಸಬೇಕಾಗಿ ಬಂದಾಗ ಸ್ವ-ದೃಢೀಕರಣ ಪಡೆಯುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟತೆಯಿಲ್ಲ. ಈವರೆಗೆ ಸ್ಕಾಲರ್ ಶಿಪ್, ರೇಶನ್ ಕಾರ್ಡ್, ವೋಟರ್ ಕಾರ್ಡ್, ಗ್ಯಾಸ್ ಸಂಪರ್ಕ, ಬ್ಯಾಂಕ್, ಪಾಸ್ ಪೋರ್ಟ್ ಹಾಗೂ ಇನ್ನಿತರ ಹಲವು ಕಡೆ ಈಗಾಗಲೇ ಆಧಾರ್ ಸಂಖ್ಯೆಯನ್ನು ಸಲ್ಲಿಸಲಾಗಿದೆ. ಅವುಗಳ ಬಗ್ಗೆ ಏನು? ಎಂಬ ಪ್ರಶ್ನೆಗಳು ಎದ್ದಿವೆ.

ಆಧಾರ್ ಸಂಖ್ಯೆ ದುರ್ಬಳಕೆಯಾದಲ್ಲಿ, ಕಾನೂನು ಕ್ರಮ ಕೈಗೊಳ್ಳಬಹುದೆಂದೂ ಪ್ರಾಧಿಕಾರ ಹೇಳಿಕೊಂಡಿದೆ.

ಆಧಾರ್ ಸಂಖ್ಯೆಯೊಂದರಲ್ಲಿ ವ್ಯಕ್ತಿಯ ಖಾಸಗಿ ಹಾಗೂ ಬೆರಳಚ್ಚಿನಂತಹ ಸೂಕ್ಷ್ಮ ಮಾಹಿತಿಗಳು ಅಡಕವಾಗಿರುವುದರಿಂದ, ಹಾಗೂ ಗೌಪ್ಯತೆಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಮಾಹಿತಿ ದುರ್ಬಳಕೆಯಾಗುತ್ತದೆ ಎಂಬ ಕಾರಣಗಳಿಂದಾಗಿ ಕಾನೂನು ತಜ್ಞರು, ಸಾಮಾಜಿಕ ಹೋರಾಟಗಾರರ ಒಂದು ವರ್ಗ ಮೊದಲನೇ ದಿನದಿಂದಲೇ ಆಧಾರ್ ಯೋಜನೆಯನ್ನು  ವಿರೋಧಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.