Asianet Suvarna News Asianet Suvarna News

ರಾಷ್ಟ್ರಕ್ಕೇ ಮಾದರಿಯಾಗಿದ್ದಾನೆ ಉಡುಪಿಯ ಈ ಯೋಧ ಕಾರ್ತೀಕ್ ಪೂಜಾರಿ

ಉಗ್ರರು ನಡೆಸಿದ ಅಟ್ಯಾಕ್ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ನೋಡಿದರೆ ಎದೆ ಝಲ್ ಅನ್ನೋವಷ್ಟು ಭೀಕರ, ಆದರೆ ಟಿವಿಗಳಲ್ಲಿ ದೃಶ್ಯಾವಳಿಗಳನ್ನು ತದೇಕಚಿತ್ತದಿಂದ ನೋಡುತ್ತಿದ ಆ ಬಾಲಕ ಮಾತ್ರ ಅಂದೇ ಸೈನ್ಯ ಸೇರುವ ತೀರ್ಮಾನ ಮಾಡಿದ್ದ. ಇಂಜಿನಿಯರಿಂಗ್ ಪೂರೈಸಿದರೂ ಎಲ್ಲಾ ಬಿಟ್ಟು ಸೈನ್ಯ ಸೇರಿ, ಚಿಕ್ಕ ವಯಸ್ಸಿನಲ್ಲೇ ಭೂಸೇನೆಯ ಕ್ಯಾಪ್ಟನ್ ಗೌರವಕ್ಕೆ ಪಾತ್ರವಾಗಿರೋ ಕನ್ನಡದ ವೀರ ಯೋಧನೊಬ್ಬನ ಕಥೆ ಇದು.

udupi soldier karthik poojari

ಉಡುಪಿ(ಜುಲೈ 26): ಸಿಯಾಚಿನ್..  ಮೈಕೊರೆಯುವ ಚಳಿ.. ನಮ್ಮನ್ನು ನಾವು ರಕ್ಷಿಸಿಕೊಳ್ಳಲಾಗದ ವಾತಾವರಣದಲ್ಲಿ ಯಾವುದಕ್ಕೂ ಜಗ್ಗದೇ.. ಕುಗ್ಗದೇ ದೇಶ ರಕ್ಷಣೆಗೆ ಟೊಂಕಟ್ಟಿ ನಿಂತಿದ್ದಾರೆ ನಮ್ಮ ವೀರ ಯೋಧರು.. ಅವರಲ್ಲಿ ಒಬ್ಬರು ಉಡುಪಿಯ ಕ್ಯಾಪ್ಟನ್ ಕಾರ್ತಿಕ್ ಕೆ. ಪೂಜಾರಿ. ಇಷ್ಟೇ ಆಗಿದ್ದರೆ ಲಕ್ಷಾಂತರ ಸೈನಿಕರಲ್ಲಿ ಕಾರ್ತೀಕ್ ಕೂಡ ಒಬ್ಬರಾಗಿರುತ್ತಿದ್ದರು.

ಮಣಿಪಾಲದ ಈಶ್ವರ್ ನಗರ ನಿವಾಸಿ ಕಾರ್ತಿಕ್ ಪೂಜಾರಿಯವರಿಗೆ ಈಗಿನ್ನೂ 26 ವರ್ಷ. ಆದ್ರೆ ಭಾರತೀಯ ಭೂಸನೇಯ ಕ್ಯಾಪ್ಟನ್. ಅತಿ ಕಿರಿಯ ವಯಸ್ಸಿನಲ್ಲೇ ಕ್ಯಾಪ್ಟನ್ ಹುದ್ದೆಗೇರಿದ ಕೀರ್ತಿ ಕಾರ್ತಿಕ್ ಅವರಿಗೆ ಸಲ್ಲುತ್ತೆ. ಸಿಯಾಚಿನ್​ನಲ್ಲಿ ಮೊದಲ ಮರಾಠಾ ಬೆಟಾಲಿಯನ್ನ ಕ್ಯಾಪ್ಟನ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.

ಕಾರ್ತಿಕ್ ಜೀವನೋಪಾಯಕ್ಕಾಗಿ ಸೇನೆಗೆ ಸೇರಿದವರಲ್ಲ.. ದೇಶಾಭಿಮಾನದಿಂದ ಸೈನಿಕನ ಸಮವಸ್ತ್ರ ತೊಟ್ಟವರು. ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಕಾರ್ತಿಕ್ ಸೈನ್ಯ ಸೇರೋಕೆ ದಿಟ್ಟ ನಿರ್ಧಾರ ಕೈಗೊಂಡಿದ್ದು ಮುಂಬೈನ ಉಗ್ರ ದಾಳಿ ಘಟನೆಯಾದಾಗ. ಆಗಿನ್ನೂ ಕಾರ್ತಿಕ್ ಬಾಲಕ. ಉಗ್ರರ ವಿರುದ್ಧ ಕಮಾಂಡೋ ಕಾರ್ಯಾಚರಣೆಯನ್ನು ಟಿವಿಗಳಲ್ಲಿ ವೀಕ್ಷಿಸಿದ ಕಾರ್ತಿಕ್ ಅಂದೇ ಕಮಾಂಡೋ ಆಗುವ ಕನಸು ಕಂಡರು. ಅದರಂತೆ 2014 ರಲ್ಲಿ ಭೂಸೇನೆಯ ಪರೀಕ್ಷೆ ಬರೆದು 35ನೇ ರ್ಯಾಂಕ್ ಪಡೆದು ಸೇನೆಗೆ ಸೇರಿದ್ದಾರೆ.

ಶಾಲಾ-ಕಾಲೇಜುಗಳಲ್ಲೇ ಸ್ಕೌಟ್, ಎನ್'ಸಿಸಿ ಸೇರಿಕೊಂಡಿದ್ದ ಕಾರ್ತಿಕ್ ಅವರಿಗೆ ರಾಷ್ಟ್ರದ ಮೇಲೆ ಎಲ್ಲಿಲ್ಲದ ಪ್ರೀತಿ. ಇದೇ ದೇಶಾಭಿಮಾನವು ಕಾರ್ತಿಕ್ ಅವರನ್ನು ಈ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟಕ್ಕೆ ಬೆಳೆಸಿದೆ. ಕಾರ್ತಿಕ್ ದೇಶಾಭಿಮಾನ ಯುವಕರಿಗೆ ಸ್ಪೂರ್ತಿಯಾಗಿದ್ದು.. ಕಾರ್ಗಿಲ್ ವಿಜಯ್ ದಿವಸ್ ಈ ದಿನದಂದು ತುಳುನಾಡಿನ ವೀರ ಯೋಧನಿಗೆ ನಮ್ಮದೊಂದು ಸಲಾಂ

- ಶಶಿಧರ್ ಮಾಸ್ತಿಬೈಲು, ಸುವರ್ಣ ನ್ಯೂಸ್, ಉಡುಪಿ

Follow Us:
Download App:
  • android
  • ios