ಶಿರೂರು ಶ್ರೀ ಶವಪರೀಕ್ಷೆ ವರದಿ ಪೊಲೀಸರ ಕೈಗೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 9:05 AM IST
Udupi krishna Mutt Shriruru Shri post-mortem report handover to police
Highlights

ಭಾರೀ ಕುತೂಹಲ ಕೆರಳಿಸಿರುವ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಮರಣೋತ್ತರ ಪರೀಕ್ಷೆಯ ವರದಿ ಸೋಮವಾರ ಪೊಲೀಸರ ಕೈಸೇರಿದೆ.

ಉಡುಪಿ (ಜು. 30): ಭಾರೀ ಕುತೂಹಲ ಕೆರಳಿಸಿರುವ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಮರಣೋತ್ತರ ಪರೀಕ್ಷೆಯ ವರದಿ ಸೋಮವಾರ ಪೊಲೀಸರ ಕೈಸೇರಿದೆ. ಆದರೆ, ಈ ವರದಿಯಲ್ಲಿ ಸ್ವಾಮೀಜಿ ಅವರ ಸಾವಿನ ಕಾರಣವೇ ಉಲ್ಲೇಖಗೊಂಡಿಲ್ಲ.

ಜು.19 ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅಸಹಜ ರೀತಿಯಲ್ಲಿ ನಿಧನರಾದ ಸ್ವಾಮೀಜಿ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಅಂದೇ, ಅದೇ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಇದೀಗ ಪರೀಕ್ಷೆಯ ವರದಿಯನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೋಮವಾರ ಎಸ್ಪಿ ಅವರಿಗೆ ಹಸ್ತಾಂತರಿಸಿದ್ದಾರೆ.

ಆದರೆ, ವರದಿಯಲ್ಲಿ ಮರಣದ ಕಾರಣವನ್ನು ಬರೆಯದೇ, ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರುವ ವೈಜ್ಞಾನಿಕ ವರದಿಯ ನಂತರ ಮರಣದ ಕಾರಣವನ್ನು ಬಹಿರಂಗಗೊಳಿಸುವುದಾಗಿ ಕೆಎಂಸಿಯ ವೈದ್ಯರು ಉಲ್ಲೇಖಿಸಿದ್ದಾರೆ.  ಆದ್ದರಿಂದ ಶ್ರೀಗಳ ಸಾವಿನ ಕಾರಣ ತಿಳಿಯಬೇಕಾದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರುವ ತನಕ ಕಾಯಬೇಕಾಗಿದೆ ಎಂದು ಪೊಲೀಸ್ ಮೂಲವು ತಿಳಿಸಿವೆ.

ತಿಂಗಳಾದರೂ ಕಾಯಬೇಕು:

ಸ್ವಾಮೀಜಿ ಅವರ ಶರೀರದ ವಿವಿಧ ಮಾದರಿಗಳನ್ನು ಕೆಎಂಸಿಯಿಂದ ನೇರವಾಗಿ ಮಂಗಳೂರಿನಲ್ಲಿರುವ ರಾಜ್ಯ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕಚೇರಿಗೆ ಕಳುಹಿಸಲಾಗಿದೆ. ಆದ್ದರಿಂದ ವಿಧಿವಿಜ್ಞಾನ ವರದಿ ಕೂಡ ನೇರವಾಗಿ ಆಸ್ಪತ್ರೆಗೆ ಬರುತ್ತದೆ. ಅಲ್ಲಿ ವೈದ್ಯರು ಪುನಃ ಮರಣೋತ್ತರ ಪರೀಕ್ಷೆಯ ವರದಿ ಮತ್ತು ವಿಧಿವಿಜ್ಞಾನ ವರಿದಿಗಳೆರಡನ್ನೂ ತಾಳೆ ಮಾಡಿ, ಖಚಿತವಾಗಿ ಸ್ವಾಮೀಜಿ ಅವರ ಸಾವಿನ ಕಾರಣವನ್ನು ತಿಳಿಸಲಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಸಾಮಾನ್ಯವಾಗಿ ತಿಂಗಳಾದರೂ ಬೇಕಾಗುತ್ತದೆ. ಆದ್ದರಿಂದ ಈ ಪ್ರಕರಣದಲ್ಲಿ ತಿಂಗಳೊಳಗಾಗಿ ವರದಿ ತಮ್ಮ ಕೈ ಸೇರುವ
ಸಾಧ್ಯತೆ ಪೊಲೀಸರಿಗೆ ಇದೆ.

ಪೊಲೀಸ್ ಸುಪರ್ದಿಯಲ್ಲೇ ಮಠ:

ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲೇ ನಡೆಯುತ್ತಿದ್ದು, ತನಿಖೆ ಇನ್ನೂ ಮುಗಿದಿಲ್ಲ. ಉಡುಪಿಯ ಶಿರೂರು ಮಠ ಮತ್ತು ಶಿರೂರು ಮೂಲಮಠಗಳೆರಡೂ ತನಿಖೆ ಮುಗಿಯವರೆಗೆ ಪೊಲೀಸ್ ಸುಪರ್ದಿಯಲ್ಲೇ ಇರುತ್ತದೆ ಎಂದು ಮೂಲಗಳು ಹೇಳಿವೆ.

ಶ್ರೀಗಳ ವಸ್ತ್ರ ವಶ:

ಸಾಯುವ ಸಂದರ್ಭದಲ್ಲಿ ಶಿರೂರು ಸ್ವಾಮೀಜಿ ಅವರು ಧರಿಸಿದ್ದ ಕಾವಿ ಬಟ್ಟೆ, ಅವರು ಚಿಕಿತ್ಸೆ ಪಡೆದ ಆಸ್ಪತ್ರೆಯ ಹಾಸಿಗೆಯ ಹೊದಿಕೆ ಮತ್ತು ತಲೆದಿಂಬುಗಳನ್ನು ಕೂಡ ಆಸ್ಪತ್ರೆಯಲ್ಲಿ ಭದ್ರವಾಗಿ ತೆಗೆದಿರಿಸಲಾಗಿದೆ. ಸಾಕ್ಷ್ಯಾಧಾರಗಳ ರೂಪದಲ್ಲಿ ಅವುಗಳನ್ನು ಪೊಲೀಸರು ಸೋಮವಾರ ಆಸ್ಪತ್ರೆಯಿಂದ ಸೀಲ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ. 

loader