ದುಬೈ(ನ.1): ಭಾರತದಲ್ಲಿ ಮಾಧ್ಯಮಗಳ ಮೇಲೆ ಅಂಕುಶ ಹಾಕುವ ಕುರಿತು ಆಗಿದ್ದಾಂಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಮಾಧ್ಯಮಗಳ ಅತೀಯಾದ ಸ್ವಾತಂತ್ರ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ನೀರುವ ಸಾಧ್ಯತೆ ಹೆಚ್ಚು ಎಂಬುದು ಕೆಲವರ ಅಭಿಪ್ರಾಯ.

ಆದರೆ ಪಕ್ಕದ ಅರಬ್ ಒಕ್ಕೂಟ ರಾಷ್ಟ್ರ(UAE) ಮಾಧ್ಯಮಗಳ ಮೇಲೆ ಅಂಕುಶ ಹಾಕಲು ನಿರ್ಧರಿಸಿದೆ. ಅದರಂತೆ ಯುಎಇಯಲ್ಲಿ ಇನ್ಮುಂದೆ ಡಿಜಿಟಲ್ ಅಥವಾ ಆನ್‌ಲೈನ್ ಮಾಧ್ಯಮಗಳು ಕಾರ್ಯ ನಿರ್ವಹಿಸಲು ಪರವಾನಿಗೆಯನ್ನು ಕಡ್ಡಾಯಗೊಳಿಸಲಾಗಿದೆ.

ಯುಎಇಯ ರಾಷ್ಟ್ರೀಯ ಮಾಧ್ಯಮ ಮಂಡಳಿ ಇಂತದ್ದೊಂದು ಆದೇಶವನ್ನು ಹೊರಡಿಸಿದ್ದು, ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಆನ್‌ಲೈನ್ ಮಾಧ್ಯಮಗಳಿಗೆ ಲೈಸೆನ್ಸ್ ಕಡ್ಡಾಯಗೊಳಿಸಲಾಗಿದೆ.

ಆನ್‌ಲೈನ್ ವಾಣಿಜ್ಯ ಸಂಸ್ಥೆಗಳು, ಮುದ್ರಣ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯ ನಿರ್ವಹಿಸುವ ಡಿಜಿಟಲ್ ಮಾಧ್ಯಮಗಳು ಇನ್ಮುಂದೆ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ. 

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಡಿಜಿಟಲ್ ಮಾಧ್ಯಮಗಳು ಮೂರು ತಿಂಗಳ ಅವಧಿಯೊಳಗೆ ಪರವಾನಿಗೆ ಪಡೆದುಕೊಳ್ಳಬೇಕಾಗಿದ್ದು, ಆ ಬಳಿಕ ಲೈಸೆನ್ಸ್ ಹೊಂದಿರದ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಗುವುದು ಎಂದು ಯುಎಇ ಸರ್ಕಾರ ಸ್ಪಷ್ಟಪಡಿಸಿದೆ. ಇದರಲ್ಲಿ ಸಾಮಾಜಿಕ ಜಾಲತಾಣಗಳೂ ಸೇರಿರುವುದು ವಿಶೇಷ.

ಉದ್ದೇಶ:

ಯುಎಇಯಲ್ಲಿ ಡಿಜಿಟಲ್ ಮಾಧ್ಯಮದ ಬೆಳವಣಿಗೆ ವೇಗ ಪಡೆದುಕೊಳ್ಳುತ್ತಿದ್ದು, ಇದರ ಮೇಲೆ ಕಾನೂನಾತ್ಮಕ ನಿಯಂತ್ರಣ ಹೊಂದುವುದು ಸರ್ಕಾರದ ಉದ್ದೇಶವಾಗಿದೆ. ದೇಶದ ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ ಮುಂತಾದ ಕಾರಣಗಳನ್ನು ನೀಡಿ ಈ ನಿಯಂತ್ರಣ ಹೇರಲು ಸರ್ಕಾರ ಸಜ್ಜಾಗಿದೆ.ಇದೇ ವೇಳೆ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಭರವಸೆಯನ್ನೂ ಯುಎಇ ಸರ್ಕಾರ ನೀಡಿದೆ.