ದುಬೈ(ಜು.10): ಭಾರತೀಯ ಮೂಲದ ಉದ್ಯಮಿ ಲಾಲೋ ಸಾಮ್ಯುಯೆಲ್‌ ಅವರಿಗೆ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದ ‘ಗೋಲ್ಡ್‌ ಕಾರ್ಡ್‌’ ಅಡಿ ಕಾಯಂ ಪೌರತ್ವ ಲಭಿಸಿದೆ. ತನ್ಮೂಲಕ ಯುಎಇಯಲ್ಲಿ ಕಾಯಂ ಪೌರತ್ವ ಪಡೆದ ಮೊದಲ ವಿದೇಶಿ ವ್ಯಕ್ತಿ ಎಂಬ ಹಿರಿಮೆಗೆ ಲಾಲೋ ಅವರು ಪಾತ್ರರಾಗಿದ್ದಾರೆ.

ಕಿಂಗ್‌ಸ್ಟನ್‌ ಗ್ರೂಪ್‌ ಎಂಬ ಕಂಪನಿಯ ಮುಖ್ಯಸ್ಥರಾಗಿರುವ ಲಾಲೋ ಸಾಮ್ಯುಯೆಲ್‌ ಅವರಿಗೆ ಪೌರತ್ವ ಹಾಗೂ ವಿದೇಶ ವ್ಯವಹಾರಗಳ ಮಹಾ ನಿರ್ದೇಶಕರಾಗಿರುವ ಬ್ರಿಗೇಡಿಯರ್‌ ಆರೀಪ್‌ ಅಲ್‌ ಶಂಸಿ ಅವರು ಗೋಲ್ಡ್‌ ಕಾರ್ಡ್‌ ಅನ್ನು ಹಸ್ತಾಂತರ ಮಾಡಿದ್ದಾರೆ. ಪ್ಲಾಸ್ಟಿಕ್‌ ಹಾಗೂ ಲೋಹ ಸಂಸ್ಕರಣೆಗೆ ಸಂಬಂಧಿಸಿದ ಹಲವು ಉತ್ಪಾದನಾ ಘಟಕಗಳನ್ನು ಲಾಲೋ ಅವರ ಕಂಪನಿ ಹೊಂದಿದೆ. ಫೋಬ್ಸ್‌ರ್ ಪತ್ರಿಕೆ ಸಿದ್ಧಪಡಿಸಿದ್ದ ಅರಬ್‌ ಜಗತ್ತಿನ 100 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಲಾಲೋ ಹೆಸರು 2013, 2014, 2015ರಲ್ಲಿ ಸ್ಥಾನ ಪಡೆದಿತ್ತು.

ಬೇರೆ ದೇಶದವರಿಗೆ ಯುಎಇಯಲ್ಲಿ ದೀರ್ಘಾವಧಿ ಅಂದರೆ 5ರಿಂದ 10 ವರ್ಷ ಅವಧಿಯುಳ್ಳ ವೀಸಾ ನೀಡಲಾಗುತ್ತದೆ. ಗೋಲ್ಡ್‌ ಕಾರ್ಡ್‌ ಪಡೆದವರು ಶಾಶ್ವತವಾಗಿ ಅಲ್ಲಿರಬಹುದಾಗಿದೆ. ಆದರೆ ನವೀಕರಣ ಮಾಡಿಸಿಕೊಳ್ಳಬೇಕಾಗುತ್ತದೆ. ಗೋಲ್ಡ್‌ ಕಾರ್ಡ್‌ ಯೋಜನೆಯನ್ನು ಕಳೆದ ವರ್ಷ ಯುಎಇ ಪ್ರಕಟಿಸಿತ್ತು.

ಈ ನಡುವೆ ಕೇರಳ ಮೂಲದ ಮಲಬಾರ್‌ ಗ್ರೂಪ್‌ ಕಂಪನಿ ಸಹ ಅಧ್ಯಕ್ಷ ಹಾಗೂ ಪೇಸ್‌ ಗ್ರೂಪ್‌ ಮುಖ್ಯಸ್ಥ ಡಾ.ಪಿ.ಎ. ಇಬ್ರಾಹಿಂ ಹಾಜಿ ಅವರಿಗೆ ಸೋಮವಾರ ಗೋಲ್ಡ್‌ ಕಾರ್ಡ್‌ ದೊರೆತಿದೆ.