ನಮ್ಮೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಹೇಳಿಕೊಳ್ಳಲು ಸಚಿವರು ಬರುತ್ತಾರೆಂದು ನಾವೆಲ್ಲಾ ಕಾದಿದ್ದೆವು. ಅವರು ಬಾರದೆ ನಿಮ್ಮನ್ನು ಕಳುಹಿಸಿದ್ದಾರೆ. ನೀವು ಕ್ಷೇತ್ರದ ಶಾಸಕರಲ್ಲಾ, ನೀವ್ಯಾಕೆ ಗುದ್ದಲಿಪೂಜೆ ಮಾಡುತ್ತಿದ್ದೀರಿ, ನಿಮ್ಮ ತಂದೆಯವರನ್ನೇ ಕಳುಹಿಸಿ ಅಂತಾ ಯುವಕರು ಪ್ರಶ್ನಿಸಿದ್ದಾರೆ.
ಮೈಸೂರು(ಡಿ.10): ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ತಮ್ಮ ಕ್ಷೇತ್ರದ ಮತದಾರರ ಮೇಲೆ ಮತ್ತೊಮ್ಮೆ ದರ್ಪ ತೋರಿಸಿದ್ದಾರೆ.
ಸಚಿವ ಮಹದೇವಪ್ಪ ಪುತ್ರ ಪ್ರತಿನಿಧಿಸುವ ತಿ. ನರಸೀಪುರ ಕ್ಷೇತ್ರ ವ್ಯಾಪ್ತಿಗೆ ಬರುವ ಕುಕ್ಕೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಲು ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಹೋಗಿದ್ದಾಗ ಆ ಗ್ರಾಮದ ಯುವಕರಾದ ಪ್ರವೀಣ್ ಮತ್ತು ಶಿವಮೂರ್ತಿ ಪ್ರಶ್ನೆ ಮಾಡಿದ್ದಾರೆ. ನಮ್ಮೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಹೇಳಿಕೊಳ್ಳಲು ಸಚಿವರು ಬರುತ್ತಾರೆಂದು ನಾವೆಲ್ಲಾ ಕಾದಿದ್ದೆವು. ಅವರು ಬಾರದೆ ನಿಮ್ಮನ್ನು ಕಳುಹಿಸಿದ್ದಾರೆ. ನೀವು ಕ್ಷೇತ್ರದ ಶಾಸಕರಲ್ಲಾ, ನೀವ್ಯಾಕೆ ಗುದ್ದಲಿಪೂಜೆ ಮಾಡುತ್ತಿದ್ದೀರಿ, ನಿಮ್ಮ ತಂದೆಯವರನ್ನೇ ಕಳುಹಿಸಿ ಅಂತಾ ಯುವಕರು ಪ್ರಶ್ನಿಸಿದ್ದಾರೆ.
ತಕ್ಷಣ ಕೆರಳಿ ಕೆಂಡಾಮಂಡಲರಾದ ಸುನಿಲ್ಬೋಸ್ ಸ್ಥಳದಲ್ಲಿದ್ದ ಪೊಲೀಸರಿಗೆ ಇಬ್ಬರೂ ಯುವಕರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಸಚಿವರ ಪುತ್ರನ ಆದೇಶವನ್ನು ಶಿರಸಾವಹಿಸಿ ಪಾಲನೆ ಮಾಡಿರುವ ತಲಕಾಡು ಪೊಲೀಸರು ಇಬ್ಬರೂ ಯುವಕರ ಮೇಲೆ ಸೆಕ್ಷನ್ 107 ಅಡಿ ಕೇಸು ಜಡಿದು, ನಿನ್ನೆ ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ಧಮಕಿ ಹಾಕಿದ್ದಲ್ಲದೆ, ಇಂದು ಬೆಳಿಗ್ಗೆ ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ. ತಿ. ನರಸೀಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸಚಿವ ಮಹದೇವಪ್ಪ ಹಾಗೂ ಪುತ್ರನ ದರ್ಪ, ದಬ್ಬಾಳಿಕೆಯನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಹಾಗೊಮ್ಮೆ ಪ್ರಶ್ನೆ ಮಾಡಿದರೆ ಅಂತಹವರಿಗೆ ಉಳಿಗಾಲವಿಲ್ಲ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ವರದಿ: ಮಧು.ಎಂ.ಚಿನಕುರಳಿ, ಸುವರ್ಣ ನ್ಯೂಸ್, ಮೈಸೂರು
